white Granite 
ಚಾಮರಾಜನಗರ

ಬಿಳಿ ಕಲ್ಲು ಗಣಿಗಾರಿಕೆ ವ್ಯಾಜ್ಯ’ ದೂರು, ಪ್ರತಿದೂರು ದಾಖಲು

ಎಂ.ರವಿ
ಗುಂಡ್ಲುಪೇಟೆ: ಬಿಳಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಉಂಟಾದ ವ್ಯಾಜ್ಯದಿಂದ ಇಬ್ಬರು ಗಣಿ ಮಾಲೀಕರು ಪಟ್ಟಣದ ಪೊಲೀಸ್ ಠಾಣೆಗೆ ಪರಸ್ಪರ ದೂರು ನೀಡಿದ್ದು ಎಫ್‌ಐ ಆರ್ ದಾಖಲಾಗಿದೆ.
ಚಾಮರಾಜನಗರ ತಾಲೂಕಿನ ಸುಜೀಂದ್ರ ತಾಲೂಕಿನ ಅರೇಪುರ ಸಮೀಪದ ನಂದೀಶ್ ಎಂಬುವರ ಗಣಿಯನ್ನು ಕೇರಳ ಮೂಲದ ಅಬ್ದುಲ್ ಹಕೀಂ ಎಂಬುವರಿಗೆ ವಹಿಸಿದ್ದರು. ಕಳೆದ ಮೂರು ತಿಂಗಳಿನಿಂದ ಗುತ್ತಿಗೆ ಹಣವನ್ನೂ ನೀಡದೆ ಗಣಿ ಇಲಾಖೆಗೆ ರಾಯಲ್ಟಿಯನ್ನೂ ಪಾವತಿಸದೆ ಕಲ್ಲು ಸಾಗಾಣೆ ಮಾಡುತ್ತಿದ್ದ ಬಗ್ಗೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಈ ಬಗ್ಗೆ ಮಾತುಕತೆ ಆಡಲು ಸುಜೀಂದ್ರ ಅವರನ್ನು ತಾಲೂಕಿನ ಮಲ್ಲಯ್ಯನಪುರ ಸಮೀಪವಿರುವ ತನ್ನ ತೋಟಕ್ಕೆ ಬರುವಂತೆ ಹಕೀಂ ನ.8ರಂದು ಕರೆದಿದ್ದಾನೆ. ಈ ಸಂದರ್ಭದಲ್ಲಿ ಸುಜೀಂದ್ರ ತನ್ನ ಸ್ನೇಹಿತರಾದ ಸೈಯದ್ ಜಾಫರ್ ಹಾಗೂ ಅಬ್ಬಾಸ್ ಎಂಬುವರ ಜತೆ ಹೋಗಿದ್ದಾಗ ಹಕೀಂ ತನ್ನ ಜತೆಗಿದ್ದ ಮುತ್ತಪ್ಪ ರೈ ಸಹಚರ ಎನ್ನಲಾದ ಸಂತೋಷ್, ಕೇರಳದ ಸೋಮೇಶ್, ನವಾಜ್, ನುಫುಲ್, ಸಯ್ಯದ್ ಎಂಬುವರ ಜತೆ ಸೇರಿ ಅವಾಚ್ಯವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಸಂತೋಷ್ ತನ್ನ ಗನ್ ಅನ್ನು ಸುಜೀಂದ್ರನ ಹಣೆಗೆ ಇಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡ ಸುಜೀಂದ್ರರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಜೀಂದ್ರನ ಸಹಚರ ಸೋಮಶೇಖರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರತಿ ದೂರು: ಈ ಬಗ್ಗೆ ಅಬ್ದುಲ್ ಹಕೀಂ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಸುಜೀಂದ್ರ ಸಹಚರರಾದ ಅರ್ಬಜ್, ಇಮ್ರಾನ್, ನಯೀಮ್ ಜಾಫರ್, ಜಾಕೀರ್ ಪಾಷ, ನಂದೀಶ್, ಸತ್ಯ, ಜಾಫರ್, ಅಫ್ಫು ಮತ್ತು ಮುಸ್ತಾಫಾ ಎಂಬುವವರ ವಿರುದ್ಧ ದೂರು ನೀಡಿದ್ದು ಎರಡೂ ದೂರುಗಳನ್ನು ಸ್ವೀಕರಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.