ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಬಳಿ ಪತ್ತೆಯಾದ ಮೃತದೇಹವನ್ನು ಪೊಲೀಸರು ಪರಿಶೀಲಿಸಿದರು.
ಗುಂಡ್ಲುಪೇಟೆ: ತಾಲೂಕಿನ ಬೇಗೂರು ಸಮೀಪ ವ್ಯಕ್ತಿಯೊಬ್ಬರ ಮೃತದೇಹ ಸಂಶಯಾಸ್ಪದವಾಗಿ ಪತ್ತೆಯಾಗಿದೆ.
ಬೇಗೂರು ಸಮೀಪದ ಹಾಲಹಳ್ಳಿ ಗ್ರಾಮದ ಎಚ್.ಎಂ.ಸ್ವಾಮಿ(73) ಎಂಬುವರ ಮೃತದೇಹ ಕಮರಹಳ್ಳಿಗೆ ಹೋಗುವ ರಸ್ತೆ ಬದಿಯಲ್ಲಿ ಕಂಡುಬಂದಿದೆ. ಜೀವನೋಪಾಯಕ್ಕಾಗಿ ಹಣಕಾಸು ವ್ಯವಹಾರ ನಡೆಸುತ್ತಿದ್ದ ಸ್ವಾಮಿ ಬೇಗೂರಿನಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಸೋಮವಾರ ಮೈಸೂರಿನಿಂದ ಊರಿಗೆ ಬಂದು ಸಂಜೆ ಮನೆಯಿಂದ ಹೋದವರು ಸ್ವಾಮಿ ಮನೆಗೆ ವಾಪಸಾಗಿರಲಿಲ್ಲ. ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಬೇಗೂರು ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ಸಿಬ್ಬಂದಿ ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆಗೆ ಟವೆಲ್ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಅವರ ಪತ್ನಿ ಅಮ್ಮಾಬಾಯಿ ಅವರು ತನ್ನ ಪತಿ ಸದಾ ಕುತ್ತಿಗೆಯಲ್ಲಿದ್ದ ಹುಲಿಯುಗುರಿನ ಚಿನ್ನದ ಸರ ಹಾಗೂ ಕೈಬೆರಳಿನಲ್ಲಿ ಧರಿಸುತ್ತಿದ್ದ ಚಿನ್ನದ ಉಂಗುರಗಳು ಕಾಣೆಯಾಗಿದ್ದು ಸಂಶಯಾಸ್ಪದವಾಗಿದೆ ಎಂದು ನೀಡಿದ ದೂರು ಸ್ವೀಕರಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ವಾರಸುದಾರರ ವಶಕ್ಕೆ ನೀಡಿದರು.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.