ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಾಮರಾಜನಗರ ವಿಶ್ವವಿದ್ಯಾಲಯ ವಾರ್ಷಿಕ ವಾರ್ಷಿಕ ಕ್ರೀಡಾಕೂಟಕ್ಕೆ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದರು. ಕೆ.ಎಂ.ಮಹಾದೇವನ್, ಮಹೇಶ್‌ನಾಯಕ್, ಜಿ.ಬಂಗಾರು ಮತ್ತಿತರರಿದ್ದರು.
ಚಾಮರಾಜನಗರ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆ ಕಡೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಾಮರಾಜನಗರ ವಿಶ್ವವಿದ್ಯಾಲಯ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ. ಮೈಸೂರಿನ ಕುರುಬೂರಿನ ಚೈತ್ರಾ ಖೋ ಖೋ ಸ್ಪರ್ಧೆಯಲ್ಲಿ ವಿಶ್ವಮಟ್ಟದಲ್ಲಿ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಅಂತೆಯೇ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ತೊಡಗಿಕೊಳ್ಳಬೇಕು. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ ಮಾಡುತ್ತದೆ. ಸದೃಢವಾದ ವ್ಯಕ್ತಿತ್ವ ನಿರ್ಮಾಣ ಬಲಿಷ್ಠ ದೇಶದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಈ ಮೂಲಕ ಎಲ್ಲರೂ ಸೇರಿ ನವ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.
ವಿವಿಯ ಮೌಲ್ಯಮಾಪನ ವಿಭಾಗದ ಕುಲ ಸಚಿವ ಕೆ.ಎಂ.ಮಹಾದೇವನ್ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ. ಇದರೊಂದಿಗೆ ಸಮಯ ಪ್ರಜ್ಞೆ, ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಚೆಲ್ಲಲು ನೆರವಾಗುತ್ತದೆ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕ್ರೀಡಾಕೂಟದ ಆಯೋಜಕ ಪಾಧ್ಯಾಪಕ ಮಹೇಶ್ ನಾಯಕ್, ಶ್ರೀವರ ಮಹಾಲಕ್ಷ್ಮೀ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯ ಅಧ್ಯಕ್ಷ ಜಿ.ಬಂಗಾರು, ಕ್ರೀಡಾಪಟು ಕಾರ್ತಿಕ್ ನಾಯಕ್ ಮತ್ತಿತರರು ಹಾಜರಿದ್ದರು.