ಚಾಮರಾಜನಗರದ ಶ್ರೀಚಾಮರಾಜೇಶ್ವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆಯಿತು.
- ಹಷೋದ್ಘಾರದೊಂದಿಗೆ ಜರುಗಿದ ಮಹಾ ರಥೋತ್ಸವ
- ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗಿ, ನವದಂಪತಿಗಳ ಕಲರವ
ಚಾಮರಾಜನಗ: ‘ಎರಡು ಕಣ್ಣು ಸಾಲದಣ್ಣ ನಮ್ಮೂರ ತೇರ ನೋಡಲು..ಎರಡು ಹೆಜ್ಜೆ ಹಾಕಿರಣ್ಣ ನಮ್ಮೂರ ತೇರನೆಳೆಯಲು’..
ಮಂಗಳವಾರ ಆಯೋಜಿಸಿದ್ದ ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ದೇವಾಲಯದ ಮಹಾರಥೋತ್ಸವವನ್ನು ನೋಡಲು ಎರಡು ಕಣ್ಣು ಸಾಲದಷ್ಟು ಶ್ರೀಮಂತಿಕೆ ಮನೆ ಮಾಡಿತು. ಸಹಸ್ರಾರು ಭಕ್ತ ಸಾಗರದ ನಡುವೆ ರಥವು ಸಾಗುತಿರಲು ಹರ್ಷೋದ್ಘಾರ ಮೊಳಗಿತು.
ಶ್ರೀಕೆಂಪನಂಜಾಂಬ ಸಮೇತ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ವಿವಿಧ ಕೋಮುವಾರು ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಸನ್ನಿಧಿಯಲ್ಲಿ ಅರ್ಚಕರು ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿದರು. ತದನಂತರ ಕೊಂಬು-ಕಹಳೆ, ನಾದಸ್ವರದೊಂದಿಗೆ ವಿವಿಧ ಕೋಮುವಾರು ಮುಖಂಡರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಾಗಿಬಂದರು. ದೇಗುಲದ ಮುಂಭಾಗ ರಥದ ಚಕ್ರ ತಿರುಗಲಾರಂಭಿಸುತ್ತಿದ್ದಂತೆಯೇ ಜಯೋಷಗಳು ಮೊಳಗಿದವು. ಭಕ್ತಿಯ ಪರಾಕಾಷ್ಟೆ ಮುಗಿಲು ಮುಟ್ಟಿತು.
ದೇಗುಲದಿಂದ ಸಾಗಿ ತೇರು ರಥದ ಬೀದಿ, ಎಸ್‌ಬಿಎಂ ರಸ್ತೆ, ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ರಸ್ತೆ, ಮಾರಿಗುಡಿ ಮುಂಭಾಗದ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆ, ನೃಪತುಂಗ ವೃತ್ತದ ಮೂಲಕ ಮರಳಿ ದೇವಸ್ಥಾನದ ಮುಂದಿನ ಸ್ವಸ್ಥಾನಕ್ಕೆ ಬಂದು ತಲುಪಿತು. ಮಹಾರಥದ ಹಿಂಭಾಗ ಕೆಂಪನಂಜಾಂಬ ಮತ್ತು ಪಾರ್ವತಿ ಉತ್ಸವಮೂರ್ತಿಯನ್ನು ಒಳಗೊಂಡ ರಥ ಸಾಗಿತು. ಮುಂಭಾಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಉತ್ಸವಮೂರ್ತಿ, ಗಣಪತಿ ಚಿಕ್ಕ ರಥಗಳಲ್ಲಿ ಸಾಗಿತು.
ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಷ್ ಅಧಿಕ ಪ್ರಮಾಣದಲ್ಲಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಎಂದಿನಂತೆ ರಥ ಎಳೆಯುವ ಕಾರ್ಯವನ್ನು ಯುವಕರ ದಂಡು ಅಚ್ಚುಕಟ್ಟಾಗಿ ಮಾಡಿತು. ಪ್ರಮುಖ ಬೀದಿಗಳಲ್ಲಿ ರಥವು ಸಾಗುವಾಗ ಮಹಿಳೆಯರು ಪೂಜೆ ಸಲ್ಲಿಸಿ ಕೈ ಮುಗಿದರು.ರಥ ಎಳೆದು ಯುವಕರು ಜೈಕಾರ ಹಾಕಿ ಗಮನ ಸೆಳದರೆ, ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಹಿರಿಯರಿಂದ ಹಿಡಿದು ಕಿರಿಯರವರೆಗೂ ಶ್ರೀಚಾಮರಾಜೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡರು. ಜಾತ್ರೆಯು ಸುಸೂತ್ರವಾಗಿ ನಡೆಯಲು ಪೊಲೀಸ್ ಇಲಾಖೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿತ್ತು. ರಥ ಸಾಗುವ ಬೀದಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ದೇವಸ್ಥಾನದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಭಕ್ತರು ಕಾಲ್ನಡಿಗೆಯಲ್ಲಿ ಬರಲು ಮಾತ್ರ ಅವಕಾಶವಿತ್ತು. ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್ ವಾಹನ ವ್ಯವಸ್ಥೆ ಮಾಡಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಜಾತ್ರೆಯಲ್ಲಿ ನವಜೋಡಿಗಳ ಕಲರವ:
ಶ್ರೀಚಾಮರಾಜೇಶ್ವರ ರಥೋತ್ಸವ ಆಷಾಢ ಮಾಸದಲ್ಲಿ ಬೇರ್ಪಡುವ ನವದಂಪತಿಗಳನ್ನು ಒಟ್ಟುಗೂಡಿಸಿತು.ಚಾಮರಾಜನಗರ, ಮೈಸೂರು, ಮಂಡ್ಯ, ತಮಿಳುನಾಡು ಸುತ್ತಮುತ್ತಲಿನ ಊರುಗಳ ನವ ವಧು-ವರರು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆದರು. ಶ್ರೀಚಾಮರಾಜೇಶ್ವರ ರಥೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ತೇರಿಗೆ ಹಣ್ಣು-ಧವನ ಎಸೆದು ಹರಕೆ ಹೊತ್ತರೆ ನವ ದಂಪತಿಗಳಿಗೆ ಸಂತಾನ ಭಾಗ್ಯ , ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಶ್ರೀಚಾಮರಾಜೇಶ್ವರ ರಥೋತ್ಸವ ಅಂಗವಾಗಿ ವರ್ತಕರ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಗರದ ಗುರುನಂಜಶೆಟ್ಟಿಛತ್ರದ ಮುಂಭಾಗದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದಗಣೇಶ್ ಮಾತನಾಡಿ, ಐತಿಹಾಸಿಕ ಶ್ರೀಚಾಮರಾಜೇಶ್ವರ ರಥೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯು ನಮ್ಮ ಸಂಘದ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ರಾಜಣ್ಣ, ಸಹ ಕಾರ್ಯದರ್ಶಿ ಕಮಲ್, ಖಜಾಂಚಿ ವಿಶ್ವಕುಮಾರ್, ಮಾಜಿ ಅಧ್ಯಕ್ಷ ಕೆ.ಎಸ್.ರವಿಕುಮಾರ್, ಎಸ್‌ಆರ್‌ಎಸ್ ಶ್ರೀನಿವಾಸ್, ಜಿ.ಆರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಬಾಲಸುಬ್ರಹ್ಮಣ್ಯ, ಎಚ್.ಬಿ.ರಾಜಶೇಖರ್ ಇತರರು ಇದ್ದರು.
ಈ ಬಾರಿ ದಂಪತಿಗಳು ಆಷಾಢದ ಶ್ರೀಚಾಮರಾಜೇಶ್ವರಸ್ವಾಮಿ ಜಾತ್ರೆಗೆ ಭಾಗವಹಿಸಿರುವುದು ಖುಷಿ ನೀಡಿದೆ. ಶ್ರೀಚಾಮರಾಜೇಶ್ವರಸ್ವಾಮಿ ರಥಕ್ಕೆ ಹಣ್ಣು ಜವನ ಎಸೆಯುವ ಮೂಲಕ ದೇವರನ್ನು ಪ್ರಾರ್ಥಿಸಿದೆವು.
-ಚೇತನ್ ಮತ್ತು ಪ್ರಿಯಾ ದಂಪತಿ, ಚಾಮರಾಜನಗರ