ಹನೂರಿನಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿಯ ವಿಜೃಂಭಣೆಯ ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು ಕುಂಭಕಳಸ ಹೊತ್ತು ಸಾಗಿದರು.  
ಚಾಮರಾಜನಗರ

ಹನೂರಲ್ಲಿ ಅಂಬೇಡ್ಕರ್ ಹಬ್ಬಕ್ಕೆ ಸಂಭ್ರಮದ ತೆರೆ

ಪ್ರಮುಖ ಮುಖ್ಯಾಂಶಗಳು

  • ಗಮನ ಸೆಳೆದ ಮೆರವಣಿಗೆ
  • ಕುಳಿದು ಕುಪ್ಪಳಿಸಿದ ಯುವ ಸಮೂಹ
ಹನೂರು: ಪಟ್ಟಣದಲ್ಲಿ ಅಂಬೇಡ್ಕರ್ ಹಬ್ಬದ ಕೊನೆಯ ದಿನವಾದ ಮಂಗಳವಾರ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಮೆರವಣಿಗೆಯ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದೊಂದಿಗೆ ಸಿಂಗರಿಸಿದ್ದ ಅಂಬೇಡ್ಕರ್ ಮೂರ್ತಿ, ಬುದ್ಧ ಹಾಗೂ ಇತರ ಮಹನೀಯರ ಟ್ಯಾಬ್ಲೊವನ್ನು ಮೆರವಣಿಗೆ ಮಾಡಲಾಯಿತು. ಡಾ.ಬಿ.ಆರ್ ಸಮುದಾಯ ಭವನದಿಂದ ಹೊರಟ ಮೆರವಣಿಗೆ ಲೊಕ್ಕನಹಳ್ಳಿ ಮುಖ್ಯ, ದಲಿತರ ಬಡಾವಣೆ, ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮೂಲಕ ಸಾಗಿ ಪೆಟ್ರೋಲ್ ಬಂಕ್‌ವರೆಗೆ ಅಂತ್ಯಗೊಂಡಿತು. ಈ ವೇಳೆ ಕಳಸ ಹೊತ್ತ ಹೆಣ್ಣು ಮಕ್ಕಳು ಎಲ್ಲರ ಗಮನ ಸೆಳೆದರು.
ಮಹಿಳೆಯರು ಒಂದೇ ತೆರೆನಾದ ಸೀರೆ ಧರಿಸಿ ಸಂವಿಧಾನದ ಪೀಠಿಕೆ ಪ್ರತಿ ಹಿಡಿದು ಸಾಗಿದರು. ಇನ್ನು ಯುವ ಪೀಳಿಗೆ ವಾದ್ಯದ ತಾಳಕ್ಕೆ ತಕ್ಕಂತೆ ಕುಳಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಂಸಾಳೆ ನೃತ್ಯ, ಡೊಳ್ಳು ಕುಣಿತ, ಗಾರುಡಿಗ ಗೊಂಬೆ, ಹಾಸ್ಯ ಗೊಂಬೆಯ ನೃತ್ಯ ಮೆರವಣಿಗೆಗೆ ಮೆರುಗು ತಂದಿತು. ಮೆರವಣಿಗೆಯಲ್ಲಿ ಬಲಗೈ ಸಮುದಾಯದ ಯಜಮಾನರು, ಮಹಿಳೆಯರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು. ಈ ಮೂಲಕ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮಂಗಲದಲ್ಲೂ ವಿಜೃಂಭಣೆ: ತಾಲೂಕಿನ ಮಂಗಲ ಗ್ರಾಮದಲ್ಲೂ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ದಲಿತ ಸಮುದಾಯದ ಬಡಾವಣೆಯನ್ನು ನೀಲಿ ಬಾವುಟ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಆನೆರೂಢ ವಾಹನದಲ್ಲಿ ಅಂಬೇಡ್ಕರ್ ಮೂರ್ತಿಯನ್ನು ಇರಿಸಿ ಗ್ರಾಮದ ಪ್ರೌಢಶಾಲೆ ಆವರಣದಿಂದ ಮುಖ್ಯ ರಸ್ತೆಯಲ್ಲಿ ಸುಮಾರು 4 ಗಂಟೆಗಳ ಕಾಲ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಸೋಲಿಗರ ತಂಡದ ಡಮರುಗ ಸದ್ದಿನ ತಾಳಕ್ಕೆ ತಕ್ಕಂತೆ ಯುವಕರು ಕುಣಿದು ಕುಪ್ಪಳಿಸಿದರು. ಜಯಘೋಷವನ್ನು ಮೊಳಗಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಜನತೆ ಭಾಗಿಯಾಗಿದ್ದರು.