ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯುಗಾದಿ, ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸೌಹಾರ್ದ ಸಭೆಯನ್ನು ನಡೆಸಲಾಯಿತು. ಶ್ರೀರೂಪಾ, ಎಂ.ಮುತ್ತುರಾಜ್, ಸ್ನೇಹಾರಾಜ್, ಪರಶುರಾಮ್ ಹಾಜರಿದ್ದರು.
- ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ
- ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸೌಹಾರ್ದ ಸಭೆ
- ವಿವಿಧ ಕೋಮುಗಳ ಮುಖಂಡರು ಭಾಗಿ
ಚಾಮರಾಜನಗರ: ಜಿಲ್ಲೆಯಲ್ಲಿ ಮುಂಬರಲಿರುವ ಯುಗಾದಿ ಹಾಗೂ ರಂಜಾನ್ ಹಬ್ಬವನ್ನು ಸೌಹಾರ್ದ ಹಾಗೂ ಸಾಮರಸ್ಯವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯುಗಾದಿ, ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ಕರೆಯಲಾಗಿದ್ದ ಸೌಹಾರ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲರು ಒಂದೇ ಎಂಬ ಭ್ರಾತೃತ್ವ ಭಾವನೆ ಸಂತಸ ಹಂಚಿಕೊಳ್ಳುವ ಸಲುವಾಗಿಯೇ ಹಬ್ಬಗಳನ್ನು ಆಚರಿಸುತ್ತಾ ಬರಲಾಗಿದೆ. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಎಲ್ಲ ಕೋಮು ಧರ್ಮಗಳ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಿದೆ. ಈ ಉತ್ತಮ ನಡೆ ಹೀಗೆಯೇ ಮುಂದುವರೆಯಲಿ ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ಹಿಂದೆಯೇ ಸಭೆ ನಡೆಸಿ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ತೀವ್ರ ತೊಂದರೆ ಇರುವ ಕಡೆ ಟ್ಯಾಂಕರ್ ಗಳಲ್ಲಿ ನೀರು ಪೂರೈಸಬೇಕು. ನಗರಸಭೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲೆಡೆ ಜನತೆಗೆ ಹಬ್ಬದ ವೇಳೆ ಸಮರ್ಪಕವಾಗಿ ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಚತೆಗೆ ಜನರ ಸಹಕಾರವು ತುಂಬಾ ಅಗತ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಿದೆ. ಹಸಿ ಕಸ, ಒಣಕಸವನ್ನಾಗಿ ಬೇರ್ಪಡಿಸಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಕಸ ವಿಲೇವಾರಿಗೆ ವೈಜ್ಞಾನಿಕವಾಗಿ ಕ್ರಮ ತೆಗೆದುಕೊಳ್ಳಲು ಹಾಗೂ ಸ್ವಚ್ಚ ನಗರಿ ಯೋಜನೆಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಮಾತನಾಡಿ, ಹಬ್ಬ ಎನ್ನುವುದು ಎಲ್ಲರೂ ಸೇರಿ ಸಂತೋಷದಿಂದ ಆಚರಿಸುವ ಸಂಪ್ರದಾಯ. ಹಬ್ಬದ ಸಂದರ್ಭದಲ್ಲಿ ಐಕ್ಯತೆ, ಸಹೋದರತೆ ಇರಲಿ. ಇನ್ನೊಬ್ಬರಿಗೆ ಯಾವುದೇ ತೊಂದರೆ ಕೊಡುವುದು ಬೇಡ. ಹಬ್ಬದ ಆಚರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾದರೂ ನಮ್ಮ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪ್ರತ್ಯೇಕ ತಂಡವಿದೆ. ಪ್ರಚೋದನಾತ್ಮಕ ಸಂದೇಶ ಹೇಳಿಕೆಗಳನ್ನು ಸಾಮಾಜಿಕ ತಾಲತಾಣಗಳ ಮೂಲಕ ರವಾನಿಸುವವರ ವಿರುದ್ದ ಕ್ರಮ ವಹಿಸಲಿದ್ದೇವೆ. ಎಲ್ಲರು ಪರಸ್ಪರ ಪ್ರೀತಿ, ಗೌರವದಿಂದ ಇದ್ದು ಸೌಹಾರ್ದಯುತ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕೋಮುಗಳ ಮುಖಂಡರು ಮಾತನಾಡಿ, ನಾವೆಲ್ಲರೂ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಇದೇ ರೀತಿಯಾಗಿ ಎಲ್ಲರು ಮುಂಬರಲಿರುವ ಹಬ್ಬಗಳನ್ನು ಪರಸ್ಪರ ಗೌರವ ಶಾಂತಿ ಪ್ರೀತಿಯಿಂದ ಆಚರಿಸುತ್ತೇವೆ. ಹಬ್ಬದ ವೇಳೆ ಕುಡಿಯುವ ನೀರು ಸ್ವಚ್ಚತೆಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಹೇಳಿದರು.
ಡಿವೈಎಸ್‌ಪಿ ಸ್ನೇಹರಾಜು, ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ವಿವಿಧ ಕೋಮುಗಳ ಮುಖಂಡರು, ಸಂಘಟನೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿರಿದ್ದರು.