ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಸನ್ಮಾನಿಸಿದರು.
- ಶಾಸಕ ಎ.ಆರ್.ಕೃಷ್ಣಮೂರ್ತಿ ಬೇಸರ
- ಗಣರಾಜ್ಯೋತ್ಸವ ಕಾರ್ಯಕ್ರಮ
ಯಳಂದೂರು: ಗಣತಂತ್ರ ವ್ಯವಸ್ಥೆ ಬಂದು 77 ವರ್ಷ ಕಳೆದರೂ ಜಾತೀಯತೆ, ಲಿಂಗ ತಾರತಮ್ಯ, ಅತ್ಯಾಚಾರ, ಮರ್ಯಾದೆ ಹತ್ಯೆಯಂತಹ ಅನಿಷ್ಟ ಪದ್ಧತಿಗಳು ಇಂದಿಗೂ ಜೀವಂತವಾಗಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬೇಸರವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ್ದ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿರುವ ಇಂತಹ ಅನಿಷ್ಟ ಪದ್ಧತಿಗಳನ್ನು ಹೊರ ಹಾಕುವ ಕಾಲ ಸನ್ನಿಹಿತವಾಗಬೇಕು. ಯುವಜನತೆ ಇದನ್ನು ದೂರ ಮಾಡುವ ಸಂಕಲ್ಪ ತೊಡಬೇಕು. ದೇಶದ ಅಭಿವೃದ್ಧಿಯ ಕಡೆ ಎಲ್ಲರ ಚಿತ್ತವೂ ಹರಿಯಬೇಕು. ಬಾಬಾ ಸಾಹೇಬರು ನೀಡಿರುವ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳನ್ನು ಕರಾರುವಕ್ಕಾಗಿ ಪಾಲಿಸುವಂತಾಗಬೇಕು. ಮರ್ಯಾದೆ ಹತ್ಯೆಯಂತಹ ಘಟನೆಗಳು ನಮ್ಮ ರಾಜ್ಯದಲ್ಲಿ ನಡೆದಿರುವುದು ತಲೆ ತಗ್ಗಿಸುವ ವಿಚಾರವಾಗಿದೆ. ಈಚೆಗೆ ಹನೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವುದು ಕ್ರೂರ ಮನಸ್ಥಿತಿಯ ಪರಮಾವಧಿಯಾಗಿದ್ದು ಇದು ನಿಲ್ಲಬೇಕು ಎಂದರು.
ನಮ್ಮ ಜಿಲ್ಲೆ ಜಾನಪದಗಳ ತವರೂರಾಗಿದೆ. ಮಲೆಮಹದೇಶ್ವರರು, ಸಿದ್ಧಪ್ಪಾಜಿ, ರಾಚಪ್ಪಾಜಿರಂತಹ ಪವಾಡ ಪುರುಷರು ಓಡಾಡಿದ ಪುಣ್ಯಭೂಮಿ ಇದಾಗಿದೆ. ಡಾ. ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರಂತಹ ಮಹಾನ್ ಕಲಾವಿದರು ಇಲ್ಲಿಯವರು ಎಂಬುದೇ ನಮ್ಮ ಹೆಮ್ಮೆಯಾಗಿದೆ. ವನಸಿರಿಯಿಂದ ಆವೃತ್ತವಾಗಿರುವ ಹುಲಿಗಳ ನಾಡು ಇಲ್ಲಿದೆ. ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮರಂತಹ ಸಾಹಿತ್ಯ ರತ್ನಗಳು ಯಳಂದೂರು ತಾಲೂಕಿನಲ್ಲಿ ಇದ್ದದ್ದು ಇಲ್ಲಿಯ ಹೆಮ್ಮೆಯಾಗಿದೆ. ಇಂತಹ ಸಮೃದ್ಧ ಜಿಲ್ಲೆಯನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ನಾವು ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಲ್ಕು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ಗಳ ಚೆಕ್‌ಗಳನ್ನು ವಿತರಿಸಿ ಸನ್ಮಾನಿಸಲಾಯಿತು. ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಜಿ.ಪಂ.ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ತಹಸೀಲ್ದಾರ್ ಎಸ್.ಎಲ್.ನಯನಾ, ಪಪಂ ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಸಿಪಿಐ ಸುಬ್ರಹ್ಮಣ್ಯ, ಗ್ಯಾರಂಟಿ ಯೋಜನೆ ಅಭಿವೃದ್ಧಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ಉಪಪ್ರಾಂಶುಪಾಲ ನಂಜುಂಡಯ್ಯ, ಉಪನ್ಯಾಸಕ ಮಹೇಶ್‌ಪ್ರಭು, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಲಿಂಗರಾಜಮೂರ್ತಿ, ವೈ.ಎಂ. ಮಂಜುನಾಥ್, ಕಂದಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಅನೇಕರು ಇದ್ದರು.