ಹನೂರಿನಲ್ಲಿ ಶ್ರೀ ಯೋಗಿ ನಾರಾಯಣ ಅವರ ಜಯಂತಿ ಆಚರಣೆ ಸಂಬಂಧ ತಹಸೀಲ್ದಾರ್ ಕೆ.ಎನ್.ಚೈತ್ರಾ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಮಾದೇಶ್, ರಂಗಸ್ವಾಮಿ, ಮಹೇಶ್, ಪ್ರಸನ್ನ ಇನ್ನಿತರರಿದ್ದರು.  
ಚಾಮರಾಜನಗರ

ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಿರಿ

ಹನೂರು: ಆಚರಿಸುವ ಜಯಂತಿಗಳು ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಕೊಂಡೋಯ್ಯುವಂತಾಗಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ತಹಸೀಲ್ದಾರ್ ಕೆ.ಎನ್.ಚೈತ್ರಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಗುರುವಾರ ಶ್ರೀ ಯೋಗಿ ನಾರಾಯಣ ಜಯಂತಿ ಆಚರಣೆ ಸಂಬಂಧ ಅಗತ್ಯ ಸಿದ್ಧತೆ ಕುರಿತು ಆಯೋಜಿಸಿದ್ದ ಅಧಿಕಾರಿಗಳು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೈವಾರ ತಾತಯ್ಯ ಎಂದೇ ಪ್ರಸಿದ್ಧ ಪಡೆದಿರುವ ಶ್ರೀ ಯೋಗಿ ನಾರೇಯಣ ಅವರು ಕೀರ್ತನೆಗಳು ಹಾಗೂ ತತ್ವ-ಪದಗಳ ಮೂಲಕ ಮನೆ ಮಾತಾಗಿದ್ದರು. ಸಾವಿರಾರು ಕೀರ್ತನೆಗಳನ್ನು ರಚಿಸಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪಸರಿಸಿದರು. ಹಾಗಾಗಿ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಿರಬೇಕಾದರೆ ಕೈವಾರ ತಾತಯ್ಯ ಅವರು ನಾಡಿಗೆ ಸ್ಫೂರ್ತಿಯಾಗಿದ್ದಾರೆ. ಉತ್ತಮ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಇವರ ಆದರ್ಶ ಎಲ್ಲರಿಗೂ ಅನುಕರಣಿಯವಾಗಿದೆ. ಈ ದಿಸೆಯಲ್ಲಿ ಇವರ ಜಯಂತಿಯನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಾ.3 ರಂದು ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಗುವುದು. ಆದ್ದರಿಂದ ಅಗತ್ಯ ಸಲಹೆ ನೀಡುವಂತೆ ತಿಳಿಸಿದರು.
ಈ ವೇಳೆ ಬಲಿಜ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನ ಮಾತನಾಡಿ, ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ, ಶಾಸಕರ ಸಲಹೆ ಪಡೆದು ದಿನಾಂಕವನ್ನು ನಿಗದಿಪಡಿಸಿ ಶ್ರೀಗಳ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗುವುದು. ಮಾ.3 ರಂದು ಸರ್ಕಾರದ ಆದೇಶದಂತೆ ಆಚರಿಸುವಂತೆ ತಿಳಿಸಿದರು.
ಇದೇ ವೇಳೆ ಸಮುದಾಯದ ಮುಖಂಡರು ಮಾತನಾಡಿ, ತಾಲೂಕಿನಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಸಮುದಾಯ ಭವನವಿಲ್ಲ. ಇದರಿಂದ ಸಭೆ ಹಾಗೂ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಮಸ್ಯೆಯಾಗಿದೆ. ಭವನಕ್ಕೆ ಸ್ಥಳ ನೀಡುವಂತೆ ಹಿಂದಿನ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ತಹಸೀಲ್ದಾರ್ ಚೈತ್ರಾ ಅವರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಶಿರಸ್ತೇದಾರ್ ಮಾದೇಶ್, ಸೆಸ್ಕ್ ಎಇಇ ರಂಗಸ್ವಾಮಿ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಶಿಕ್ಷಣ ಸಂಯೋಜಕ ಮಹೇಶ್, ಮುಖಂಡರಾದ ರಂಗಸ್ವಾಮಿ, ಮಹೇಶ್, ಜಯರಾಮು ಹಾಗೂ ಇನ್ನಿತರರು ಇದ್ದರು.