ಯಳಂದೂರು ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗೆ ಕ್ಯಾಮರಾವನ್ನು ಅಳವಡಿಸುತ್ತಿರುವ ಸಿಬ್ಬಂದಿ
ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹುಲಿ ಗಣತಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಪ್ರಥಮ ಹಂತವಾಗಿರುವ ಕ್ಯಾಮರಾಗಳನ್ನು ಅಳವಡಿಸುವ ಕೆಲಸ ಮುಗಿದಿದೆ.
ಎಐಟಿಎಯಿಂದ ಹುಲಿ ಸರ್ವೇ: 2025-26 ನೇ ಸಾಲಿನಲ್ಲಿ ಆಲ್ ಇಂಡಿಯಾ ಟೈಗರ್ ಎಷ್ಟಿಮೇಷನ್ (ಎಐಟಿಇ) (ಅಖಿಲ ಭಾರತ ಹುಲಿ ಗಣತಿ) ವತಿಯಿಂದ ದೇಶಾದ್ಯಂತ ಹುಲಿ ಗಣತಿ ನಡೆಯುತ್ತಿದೆ. ಇದರ ಭಾಗವಾಗಿ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಎಲ್ಲ ವಲಯಗಳಲ್ಲೂ ಕ್ಯಾಮರಾ ಅಳವಡಿಸಲಾಗಿದೆ. ಬಿಆರ್‌ಟಿ ವ್ಯಾಪ್ತಿಯಲ್ಲಿ ಇದುವರೆಗೂ 300 ಕಡೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ಎರಡು, ಮೂರು ದಿನಕ್ಕೊಮ್ಮೆ ಈ ಕ್ಯಾಮರಾದಲ್ಲಿ ಅಳವಡಿಸಲಾಗಿರುವ ಎಸ್‌ಡಿ ಕಾರ್ಡ್‌ನ್ನು ಸಿಬ್ಬಂದಿ ಪರಿಶೀಲಿಸುತ್ತಾರೆ. ಇದರ ಮೆಮೊರಿ ತುಂಬಿದ್ದರೆ ಕಾರ್ಡ್‌ಅನ್ನು ಬದಲಿಸಲಾಗುತ್ತದೆ. ಇದನ್ನೆಲ್ಲಾ ಕಂಪ್ಯೂಟರ್‌ನಲ್ಲಿ ಶೇಖರಣೆ ಮಾಡಲಾಗುತ್ತದೆ. ಹುಲಿಯೊಂದಿಗೆ ಪ್ರತಿ ಪ್ರಾಣಿಯ ಚಲನವಲನಗಳು ಇದರಲ್ಲಿ ಶೇಖರಣೆಯಾಗುತ್ತದೆ. 25 ದಿನಗಳ ಕಾಲ ಈ ಸರ್ವೇ ನಡೆಯಲಿದೆ.
ಇದಾದ ಬಳಿಕ ಸೈನ್ ಸರ್ವೇ ನಡೆಯುತ್ತದೆ. ಮೂರು ದಿನಗಳ ಕಾಲ ಇದು ನಡೆಯಲಿದ್ದು, ಇದರಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರತಿ ಬೀಟ್‌ನ ಪ್ರತ್ಯೇಕ ಸ್ಥಳಗಳಲ್ಲಿ ಪ್ರತಿ ದಿನ 5 ಕಿ.ಮಿ. ಸಂಚರಿಸುತ್ತಾರೆ. ಈ ಸಂಚಾರದಲ್ಲಿ ಹುಲಿಯ ಲದ್ದಿಯನ್ನು ಪರಿಶೀಲನೆ ಮಾಡಲಾಗುತ್ತದೆ. ಇದನ್ನು ಸಂಗ್ರಹಿಸಿ ಇದರಿಂದಲೂ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಇದರೊಂದಿಗೆ ಆನೆ, ಚಿರತೆಯ ಮಲದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗುತ್ತದೆ. ಅಲ್ಲದೆ ಹುಲಿ ಎಲ್ಲೆಯನ್ನು ಸ್ಥಳವನ್ನು ಗುರುತಿಸಲು ಮರಕ್ಕೆ ಪರಚಿರುವ ಉಗುರಿನ ಗುರುತುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಲಾಗುತ್ತದೆ.
ಇದಾದ ಬಳಿಕ ಲೈವ್ ಟ್ರಾನ್ಸಾಕ್ಟ್ ವಿಧಾನವನ್ನು ಬಳಕೆ ಮಾಡಲಾಗುತ್ತದೆ. ಇದು ನಾಲ್ಕು ದಿನ ಮುಂಜಾನೆ ಹಾಗೂ ನಾಲ್ಕು ದಿನ ಸಂಜೆಗಳ ಕಾಲ ನಡೆಯಲಿದ್ದು, ಇದರಲ್ಲಿ ಪ್ರತಿ 200 ಮೀ.ನಲ್ಲಿ ಇಲ್ಲಿನ ಜೀವ ವೈವಿಧ್ಯತೆ, ಪ್ರಾಣಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಆದರೆ ಕ್ಯಾಮರಾ ಟ್ರಾಪಿಂಗ್‌ನ್ನು ಪ್ರತಿ ವರ್ಷವೂ ಮಾಡಲಾಗುತ್ತದೆ ಎಂದು ಯಳಂದೂರು ವಲಯದ ಆರ್‌ಎಫ್‌ಒ ಸತೀಶ್ ಮಾಹಿತಿ ನೀಡಿದರು.