ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿ ಭಾನುವಾರ ಭಕ್ತರು ಬಸ್ಸಿಗಾಗಿ ಮುಗಿ ಬಿದ್ದರು.
ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಾನುವಾರ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ಆನೆತಲೆ ದಿಂಬದ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಸ್ಸಿನ ಕೊರತೆಯಿಂದಾಗಿ ಭಕ್ತರು ಗಂಟೆಗಟ್ಟಲೇ ಬೆಟ್ಟದಲ್ಲಿ ಕಾದು ಕುಳಿತು ತೊಂದರೆ ಅನುಭವಿಸಿದರು.
ಭಾನುವಾರ ರಜೆ ಇದ್ದ ಕಾರಣ ಮತ್ತು ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಸರ್ಕಾರಿ, ಖಾಸಗಿ ಸಂಸ್ಥೆ ಅಧಿಕಾರಿಗಳು ಹಾಗೂ ನೌಕರರು ಕಾರು, ಟೆಂಪೋ ಟ್ರಾವೆಲ್ಲರ್, ಮಿನಿ ಬಸ್ ಹಾಗೂ ಇತರೆ ವಾಹನಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಜತೆಗೆ ಬೈಕ್, ಆಟೋರಿಕ್ಷಾ , ಸಾರಿಗೆ ಹಾಗೂ ಖಾಸಗಿ ಸಂಚಾರವೂ ಹೆಚ್ಚಿತ್ತು. ಇದರಿಂದ ಕ್ಷೇತ್ರಕ್ಕೆ ಆಗಮಿಸುವ ವಾಹನಗಳ ಸಂಚಾರ ಹೆಚ್ಚಾಗಿತ್ತು. ತಿರುವಿನಿಂದ ಕೂಡಿರುವ ಕಿರಿದಾದ ರಸ್ತೆಯ ಆನೆತಲೆ ದಿಂಬದಲ್ಲಿ ದಿನದ ಬಹುತೇಕ ಸಮಯ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂಧ ವಾಹನಗಳು ಕೆಲಕಾಲ ಸಾಲುಗಟ್ಟಿ ನಿಲ್ಲುವಂತಾಯಿತು. ಭಕ್ತರು ಕಿರಿಕಿರಿ ಅನುಭವಿಸುವಂತಾಯಿತು. ಬೆಟ್ಟಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಸುಗಮ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಹರಸಾಹಸ ಪಟ್ಟರು.
ಬಸ್ಸಿಗಾಗಿ ನೂಗು ನುಗ್ಗಲು: ಅಮಾವಾಸ್ಯೆ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾ.ನಗರ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಶಕ್ತಿ ಯೋಜನೆಯ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಭಕ್ತರು ವಾಪಸ್ ಊರಿನತ್ತ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂಬುದು ತಿಳಿದಿದ್ದರೂ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ ಸೌಕರ್ಯ ಒದಗಿಸಿರಲಿಲ್ಲ.
ಪರಿಣಾಮ ಭಕ್ತರು ಬಸ್ಸಿಗಾಗಿ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯುವಂತಾಯಿತು. ಒಂದು ಬಸ್ ಆಗಮಿಸುತ್ತಿದ್ದಂತೆಯೇ ಭಕ್ತರು ನುಗ್ಗಾಟ ಮಾಡಿಕೊಂಡು ಏರಿ ಆಸನವನ್ನು ಹಿಡಿಯಲು ಮುಗಿ ಬೀಳುತ್ತಿದ್ದರು. ಕೆಲ ಭಕ್ತರು ನಿಂತುಕೊಂಡೇ ಪ್ರಯಾಣ ಬೆಳೆಸಿದರು. ಈ ಸಂದಭ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು.