ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ-2026 ಕಾರ್ಯಕ್ರಮ ಆಯೋಜನೆಯ ಕುರಿತು ಮೂರನೇಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ
- ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಅಂಗವಾಗಿ ಮೂರನೇ ಪೂರ್ವಭಾವಿ ಸಭೆ
ಚಾಮರಾಜನಗರ: ಬುದ್ಧಂ ಶರಣಂ, ಧಮ್ಮಂ ಶರಣಂ, ಹಾಗೂ ಸಂಘಂ ಶರಣಂ ಎಂಬ ಮೂರು ಪರಿಕಲ್ಪನೆಯಲ್ಲಿ ಈ ಬಾರಿಯ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ-2026 ಕಾರ್ಯಕ್ರಮ ಆಯೋಜನೆಯ ಕುರಿತು ಮೂರನೇಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅ.24 ಮತ್ತು 25 ರಂದು ನಡೆಯಲಿರುವ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ-2026 ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ವಿದ್ವಾಂಸರುಗಳನ್ನು ಒಳಗೊಂಡಂತೆ, ಅಂತಾರಾಷ್ಟ್ರೀಯ ಮಟ್ಟದ ಬೌದ್ಧ ಭಿಕ್ಕುಗಳನ್ನು ಆಹ್ವಾನ ಮಾಡಬೇಕು. ಅಂತರಾಷ್ಟ್ರೀಯ ಮಟ್ಟದ ಸಾಮಾಜಿಕ ಚಳುವಳಿಗಾರರು ಮತ್ತು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಚಿಂತಕರನ್ನು ಆಹ್ವಾನ ನೀಡಬೇಕಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಸಮುದಾಯದ ಪ್ರತಿಯೊಬ್ಬ ನಾಯಕರನ್ನು ಆಹ್ವಾನಿಸಬೇಕು. ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ, ಮೆರವಣಿಗೆ ಸಮಿತಿ, ಆಹಾರ ಸಮಿತಿ, ವೇದಿಕೆ ನಿರ್ವಹಣಾ ಸಮಿತಿ, ಆರೋಗ್ಯ ಸಮಿತಿ, ಸ್ವಚ್ಛತಾ ಸಮಿತಿ, ವಸ್ತು ಪ್ರದರ್ಶನ ಮತ್ತು ಪುಸ್ತಕ ಮಳಿಗೆ ಸಮಿತಿ, ಧಮ್ಮ ಪಯಣ ಸಮಿತಿ, ಸಾಂಸ್ಕೃತಿಕ ಸಮಿತಿ, ವಸತಿ ಸಮಿತಿ, ಪ್ರಚಾರ ಸಮಿತಿ, ಮರಣ ಸಂಚಿಕೆ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕ್ರಮದಲ್ಲಿ ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಒಳಗೊಂಡ ವಿಚಾರ ಸಂಕಿರಣಗಳು, ಬುದ್ಧ ಕವಿಗೋಷ್ಠಿ, ಮತ್ತು ಅಂಬೇಡ್ಕರ್ ಮತ್ತು ಬುದ್ಧರ ಚಿಂತನೆಗಳನ್ನು ಬಿತ್ತರಿಸುವ ಒಳಗೊಂಡ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ರೂಪಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮನೋರಖಿತ ಬಂತೇಜಿ ಮಾತನಾಡಿ, ಬೌದ್ಧ ಧರ್ಮ ಪರಂಪರೆ ಜಗತ್ತಿನಲ್ಲೇ ಶ್ರೇಷ್ಠ ಪರಂಪರೆಯಾಗಿದೆ. ಅಹಿಂಸೆಯನ್ನು ಪ್ರತಿಪಾದಿಸುವ ಮತ್ತು ಶಾಂತಿ ಸಾಧನೆಯ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಬೌದ್ಧ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೌದ್ಧ ಪರಂಪರೆಯನ್ನು ನಾವು ಅನುಸರಿಸುವ ಅನಿವಾರ್ಯತೆ ಎಲ್ಲರಿಗೂ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಬೇಕಿದೆ ಎಂದರು.
ಈ ಸಭೆಗೆ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಮತ್ತು ಹನೂರು ತಾಲೂಕುಗಳಿಂದ ಬೌದ್ಧ ಅನುಯಾಯಿಗಳು, ಅಂಬೇಡ್ಕರ್ ಅನುಯಾಯಿಗಳು, ಸಾಹಿತಿಗಳು, ಚಿಂತಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.