crime 
ಚಾಮರಾಜನಗರ

ಸಹೋದರಿಗೆ ಚೂರಿ ಇರಿದ ಸಹೋದರ

ಪ್ರಮುಖ ಮುಖ್ಯಾಂಶಗಳು

  • ಆಸ್ತಿ ಮಾರಾಟದ ಹಣ ಹಂಚಿಕೆ ವಿಷಯವಾಗಿ ಮಾತಿನ ಚಕಮಕಿ
  • ಭೈರನತ್ತ ಗ್ರಾಮದಲ್ಲಿ ಕೃತ್ಯ
ಹನೂರು: ತಾಲೂಕಿನ ಭೈರನತ್ತ ಗ್ರಾಮಕ್ಕೆ ಶುಕ್ರವಾರ ಆಗಮಿಸಿದ್ದ ಸಹೋದರಿಗೆ ಅಣ್ಣನೇ ಚೂರಿಯಿಂದ ಇರಿದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಳ್ಳೇಗಾಲದ ಶೇಕ್‌ರಾಜ್ ಅವರ ಪತ್ನಿ ಶೀಲಾವತಿ ಗಾಯಗೊಂಡವರು. ಶೀಲಾವತಿ ಅವರ ಅಣ್ಣ ಕುಮಾರಸ್ವಾಮಿ ಹಲ್ಲೆ ನಡೆಸಿದವನು. ಭೈರನತ್ತ ಗ್ರಾಮದಲ್ಲಿನ ಪಿತ್ರಾರ್ಜಿತ ಜಮೀನನ್ನು ಮಾರಾಟ ಮಾಡಿ, ಬಂದ ಹಣವನ್ನು ಶೀಲಾವತಿ, ಈಕೆಯ ತಾಯಿ, ಅಣ್ಣ ಕುಮಾರಸ್ವಾಮಿ ಹಾಗೂ ಮತ್ತೊಬ್ಬ ಸಹೋದರಿ ಹಂಚಿಕೆ ಮಾಡಲಾಗಿತ್ತು. ಹಣ ಹಂಚಿಕೆಯಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸಹೋದರಿ ಶೀಲಾವತಿ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದ. ಅಲ್ಲದೆ ಸಿಕ್ಕಾಗೆಲ್ಲ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

ಸಂಬಂಧಿಕರ ಗೃಹಪ್ರವೇಶದ ಹಿನ್ನೆಲೆಯಲ್ಲಿ ಶುಕ್ರವಾರ ಶೀಲಾವತಿ ಭೈರನತ್ತ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ದೂರು ನೀಡಲಾಗಿ ಸ್ಥಳಕ್ಕಾಗಮಿಸಿದ 112 ಪೊಲೀಸರು ಸಮಾಧಾನ ಪಡಿಸಿದ್ದರು. ಆದರೆ ಮಧ್ಯಾಹ್ನ 3ರ ವೇಳೆಯಲ್ಲಿ ಶೀಲಾವತಿ ಅವರು ಕೊಳ್ಳೇಗಾಲಕ್ಕೆ ತೆರಳಲು ಗ್ರಾಮದ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಕುಮಾರಸ್ವಾಮಿ ಏಕಾಎಕಿ ಸಹೋದರಿಯ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಬೆನ್ನು, ಕೈ ಹಾಗೂ ಕಿವಿಯ ಭಾಗದಲ್ಲಿ ಗಾಯಗೊಂಡ ಶೀಲಾವತಿ ಅವರನ್ನು ಸಂಬಂಧಿಕರು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಶೀಲಾವತಿ ಅವರ ಹೇಳಿಕೆಯನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿಕೊಂಡ ಹನೂರು ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.