ಹನೂರು ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸನ್ ರೈಸ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಫೌಂಡೇಷನ್ ವತಿಯಿಂದ ನೋಟ್ ಬುಕ್ ವಿತರಿಸಲಾಯಿತು. ಮುನಿ ನಾರಾಯಣ, ರಾಚಪ್ಪ, ಆನಂದ್, ಶಿವಮಲ್ಲು ಇತರರಿದ್ದರು.
ಹನೂರು : ಪ್ರಸ್ತುತ ಖಾಸಗಿ ಶಾಲೆಗಳ ಭರಾಟೆ ಜೋರಾಗಿದೆ. ಆದರೆ, ಸರ್ಕಾರಿ ಶಾಲೆಗಳು ಉಳಿಸುವ ಅನಿವಾರ್ಯತೆ ಇದೆ ಎಂದು ಬೆಂಗಳೂರು ಸನ್‌ರೈಸ್ ಫೌಂಡೇಷನ್ ಹಾಗೂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿ ನಾರಾಯಣ ತಿಳಿಸಿದರು.
ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸನ್ ರೈಸ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಷನ್ ವತಿಯಿಂದ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದ ಹಾಗೆ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಪಾಲಕರ ಆಶಯದಂತೆ ಚೆನ್ನಾಗಿ ಓದಬೇಕು. ಶೈಕ್ಷಣಿಕವಾಗಿ ಸಾಧನೆ ಮಾಡಬೇಕು. ಈ ದೆಸೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ವಲಯದ ಆಲಂಬಾಡಿ, ಅಲಗಾಪುರ, ಚಂಗವಾಡಿ, ಭದ್ರಯ್ಯನಹಳ್ಳಿ ಹಾಗೂ ಹನೂರಿನ ಪಿಎಂಶ್ರೀ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ ಇನ್ನಷ್ಟು ಸವಲತ್ತುಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಶಿವಮಲ್ಲು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡ ಕುಟುಂಬದ ಮಕ್ಕಳಿದ್ದಾರೆ. ಇದನ್ನು ಮನಗಂಡು ಫೌಂಡೇಷನ್ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸುತ್ತಿರುವುದು ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇತರರಿಗೆ ಸ್ಫೂರ್ತಿಯಾಗಲಿದೆ ಎಂದರು.
ಫೌಂಡೇಷನ್‌ನ ಅಲಗಾಪುರ ರಾಚಪ್ಪ, ಆನಂದ್, ಕೃಷ್ಣ, ವೀರಭದ್ರಯ್ಯ, ಹನೂರು ಮಹಾದೇವ, ಶಿಕ್ಷಕರು, ಇತರರಿದ್ದರು.