ಪಿ.ಜಿ.ಪಾಳ್ಯ ಸಫಾರಿಯಲ್ಲಿ ಕಾಣಿಸಿಕೊಂಡ ಅಪರೂಪದ ಕರಿ ಚಿರತೆ.
- ಮಲೆಮಹದೇಶ್ವರ ವನ್ಯಜೀವಿ ಧಾಮ
- ಪಿ.ಜಿ.ಪಾಳ್ಯ ಸಫಾರಿಯ ಅರಣ್ಯ ಪ್ರದೇಶ
ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಪಿ.ಜಿ.ಪಾಳ್ಯ ಸಫಾರಿಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಪ್ರವಾಸಿಗರಿಗೆ ಅಪರೂಪದ ಕರಿ ಚಿರತೆ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ.
ಈ ಸಫಾರಿ ಅರಣ್ಯ ಪ್ರದೇಶದಲ್ಲಿ ಕಾಡಾನೆ, ಕಾಡು ಕೋಣ, ಜಿಂಕೆ, ಸೀಳುನಾಯಿ, ಸಾಮಾನ್ಯ ಚಿರತೆ ಸೇರಿದಂತೆ ಇನ್ನೂ ಅನೇಕ ಕಾಡು ಪ್ರಾಣಿಗಳಿದ್ದು, ಸಫಾರಿಗೆ ತೆರಳುವ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದೆ. ಆದರೆ ಕರಿ ಚಿರತೆ ಕಾಣಿಸಿಕೊಂಡಿರಲಿಲ್ಲ.
ಭಾನುವಾರ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯುತ್ತಿದ್ದ ಈ ಕರಿ ಚಿರತೆ ಕಾಣಿಸಿಕೊಂಡಿದೆ. ಪ್ರವಾಸಿಗರು ವೀಕ್ಷಿಸುತ್ತಿದ್ದಂತೆ ಹಾಗೂ ವಾಹನ ಶಬ್ದದೊಂದಿಗೆ ಚಿರತೆ ಅತ್ತಿತ್ತ ನೋಡುತ್ತ ಅರಣ್ಯ ಪ್ರದೇಶದೊಳಗೆ ತೆರಳಿತು. ಕರಿ ಚಿರತೆ ಕಂಡ ಪ್ರವಾಸಿಗರು ಖುಷಿ ಪಟ್ಟಿದ್ದು, ಇದರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದು ವನ್ಯಜೀವಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.