ಗುಂಡ್ಲುಪೇಟೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಡಾ.ಗುರುಪ್ರಸಾದ್ ಮಾತನಾಡಿದರು. ಸಂಪತ್ತು, ಮಹದೇವಪ್ಪ, ಮಹೇಶ್, ನಂದೀಶ್ ಇದ್ದರು.
- ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಹೇಳಿಕೆ
ಗುಂಡ್ಲುಪೇಟೆ: ಎರಡು ವರ್ಷಗಳ ಹಿಂದೆಯೇ ಹಲವು ಅಕ್ರಮಗಳ ಕುರಿತು ಸಲ್ಲಿಸಿದ್ದ ಮನವಿ ಪತ್ರವನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಲಕ್ಷೃದ ವಿರುದ್ಧ ಏ.21ರಂದು ಪಟ್ಟಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಹೇಳಿದರು.
ನಾಲ್ಕು ಹಂತದ ಕೆರೆಗಳಿಗೆ ನೀರು ಬಿಡಲಾಗದವರು ನೂರತ್ತು ಕೆರೆಗೆ ನೀರು ತುಂಬಿಸುವರೇ? ಇದೊಂದು ಹಣ ಗುಳುಂ ಮಾಡುವ ಷಡ್ಯಂತ್ರ ಅಷ್ಟೇ. ಸಿಎಂ ಸಿದ್ದರಾಮಯ್ಯ ಅವರ ಅವಿವೇಕಿತನದ ನಡೆ ಒಳ್ಳೆಯದಲ್ಲ. ರೈತ ವಿರೋಧಿತನ ಬಿಡಬೇಕು. ಖನಿಜ ಸಂಪತ್ತು ಸಾಗಣೆ, ಜನಸಾಮಾನ್ಯರ ಸಾವಿಗೆ ನೇರ ಬೆಂಬಲ, ಕೇರಳಿಗರ ಹಣಕ್ಕಾಗಿ ದುಂಬಾಲು ಬಿದ್ದಿರುವ ಅಧಿಕಾರಿಗಳು, ಜನಪ್ರತಿನಿಧಿಗಳು, ಕೇರಳಿಗರ ಮೇಲೆ ವಿಶೇಷ ಕಾಳಜಿ ಹಾಗೂ ಗಡಿಯನ್ನೇ ಮಾರಾಟ ಮಾಡುವ ಕಾಲ ದೂರವಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುರಂಗಮಾರ್ಗಕ್ಕೆ ಮಂಡಿಯೂರಿ ಗುಲಾಮಗಿರಿ ಪ್ರದರ್ಶನ, ಕೇರಳದ ಎಂಪಿ ಮುಂದೆ ನಡುಬಗ್ಗಿಸಿದ ರೈತರು, ಜನಸಾಮಾನ್ಯರ ಮೇಲೆ ಮುಗಿಬೀಳುವ ಹಾಗೂ ಮೂಲೆ ಹೊಳೆಯಿಂದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗದ ಸಿದ್ದರಾಮಯ್ಯ ಕೇರಳದವರಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಲಂಚಬಾಕ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರವೇ ಲೂಟಿಗಿಳಿದಿದೆ. ಅರಣ್ಯ ಇಲಾಖೆ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರೂ ಕ್ರಮವಾಗಿಲ್ಲ. ಬಂಡೀಪುರದಲ್ಲಿ ಆರ್‌ಎಫ್‌ಒಗಳಾದ ಮಹದೇವ, ಮಲ್ಲೇಶ್, ಪುನೀತ್ ಹಲವಾರು ವರ್ಷಗಳಿಂದ ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದು ಎಲ್ಲ ಅಕ್ರಮಗಳಿಗೂ ಕಾರಣರಾಗಿದ್ದಾರೆ. ಆದರೂ ಯಾಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಭೇಟಿಗೆ ಅವಕಾಶವಿದ್ದರೂ ಮನವಿ ನೀಡದೆ ಕಪ್ಪುಪಟ್ಟಿ ಧರಿಸಿ ಸತ್ಯಾಗ್ರಹ ಮಾಡುವುದರ ಜತೆಗೆ ಕಪ್ಪುಬಾವುಟ ಪ್ರದರ್ಶನ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಸಂಪತ್ತು ಕುಂದಕೆರೆ ಮಾತನಾಡಿ, ಗಣಿಗಾರಿಕೆ ಉದ್ಯಮಿಯಾಗಿರುವ ಶಾಸಕರಿಂದ ತಾಲೂಕಿನ ಎಲ್ಲ ಅಕ್ರಮಗಳಿಗೆ ಶ್ರೀರಕ್ಷೆ ದೊರಕುತ್ತಿದೆ. ಕ್ಷೇತ್ರದ ಅಧ್ವಾನದ ಕುರಿತು ಕಾಳಜಿ ತೋರದ, ಸಾವು-ನೋವುಗಳಿಗೆ ಸ್ಪಂದಿಸದ ಶಾಸಕರು ಕೇರಳಿಗರಿಗೆ ವಿಶೇಷ ಅಧಿಕಾರ ಕೊಟ್ಟಿದ್ದಾರೆ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲಾಗದೆ ಕಾಲಹರಣ ಮಾಡುತ್ತಿದ್ದಾರೆ. ಇವರಿಂದ ರೈತಪರ ಕೆಲಸ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ತಾಲೂಕು ಅಧ್ಯಕ್ಷ ಹೊಸೂರು ಮಹೇಶ್, ಶಂಭುಲಿಂಗಪ್ಪ, ನಂದೀಶ್, ಇತರರು ಸುದ್ದಿಗೋಷ್ಠಿಯಲ್ಲಿದ್ದರು.