ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹನೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.  
ಚಾಮರಾಜನಗರ

ಹನೂರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಹನೂರು: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಹನೂರಿನಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎಚ್.ನಾಗಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಿಸಿದರು.
ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹಾದೇವಸ್ವಾಮಿ ಮಾತನಾಡಿ, ಪ್ರದಾನಿ ನರೇಂದ್ರ ಮೋದಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಉತ್ತಮ ಆಡಳಿತವನ್ನು ಮೆಚ್ಚಿ ಬಿಹಾರದ ಜನತೆ ಬಹುಮತದಿಂದ ಎನ್‌ಡಿಎ ಕೂಟವನ್ನು ಬೆಂಬಲಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರು ವೋಟ್ ಚೋರಿ ಅಭಿಯಾನ ನಡೆಸುವ ಮೂಲಕ ಮತ ಕಳ್ಳತನವಾಗಿದೆ ಎಂದು ಎಲ್ಲ ಕ್ಷೇತ್ರಗಳಲ್ಲೂ ಸಹಿ ಅಭಿಯಾನ ನಡೆಸಿದ್ದರು. ಆದರೆ, ಬಿಹಾರದ ಜನತೆ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ಹನೂರಿನ ಕೆ.ಪಿ.ವೃಷಭೇಂದ್ರಸ್ವಾಮಿ, ಮಹದೇಶ್ವರ ಬೆಟ್ಟದ ಚಂಗವಾಡಿ ರಾಜು, ಬಿ.ಎಸ್. ಲೋಕೇಶ್ ಜಟ್ಟಿ, ಮಾಜಿ ಅಧ್ಯಕ್ಷ ಜಗನ್ನಾಥ್ ನಾಯ್ಡು, ಕಿಸಾನ್ ಸಂಘದ ಅಧ್ಯಕ್ಷ ರಾಮಾಪುರ ರಾಜೇಂದ್ರ, ಬಿಜೆಪಿ ಮುಖಂಡರಾದ ಮೂರ್ತಿ, ಪುಟ್ಟರಾಜು, ಸೈಯದ್ ಚಾಂದ್, ಮುರುಗೇಶ್, ಅರವಿಂದ್ ರೆಡ್ಡಿ ಹಾಗೂ ಇನ್ನಿತರರು ಇದ್ದರು