ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.  Bjp protest
ಚಾಮರಾಜನಗರ

ಗ್ಯಾರಂಟಿ ನೆಪದಲ್ಲಿ ಜನರಿಗೆ ಬರೆ

ಮಾಜಿ ಎಂಎಲ್‌ಸಿ ಪ್ರೊ.ಕೆ.ಎಸ್.ಮಲ್ಲಿಕಾರ್ಜುನಪ್ಪ ಕಿಡಿ

ಚಾಮರಾಜನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ, ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನ ತಲುಪಿ ಕೆಲ ಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರು, ಕೂಲಿ ಕಾರ್ಮಿಕರು ಬಳಸುವ ದಿನನಿತ್ಯದ ಆಹಾರ ಸಾಮಗ್ರಿಗಳು ಹಾಗೂ ಇನ್ನಿತರೆ ವಸ್ತುಗಳ ಬೆಲೆಗಳನ್ನು ಯದ್ವಾತದ್ವಾ ಏರಿಕೆ ಮಾಡಿ, ಜೀವನ ನಡೆಸುವುದು ಕಷ್ಟವಾಗುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಗ್ಯಾರಂಟಿಗಳನ್ನು ನೀಡುತ್ತೇವೆ, ಉಚಿತವಾಗಿ ನೀಡುತ್ತೇವೆ ಎಂದು ಒಂದು ಕಡೆ ಹೇಳಿ, ಮತ್ತೊಂದು ಕಡೆಯಿಂದ ಹಣವನ್ನು ಸುಲಿಗೆ ಮಾಡುತ್ತಿದೆ. ಪತ್ನಿಗೆ ಕೊಟ್ಟು ಗಂಡನ ಜೇಬು ಖಾಲಿ ಮಾಡುವ ಈ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮಹಿಳೆಯರು ಬೇಸತ್ತು ಹೋಗಿದ್ದಾರೆ. ಇಂಥ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ದೂರಿದರು.

ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ, ವಿಧವಾ, ಅಂಗವಿಕಲರ ವೇತನಗಳನ್ನು ಸಹ ಕಡಿತ ಮಾಡುವ ಮೂಲಕ ಅವರು ತಾಲೂಕು ಹಾಗೂ ಜಿಲ್ಲಾ ಕಚೇರಿಗೆ ಅಲೆಯುವಂತೆ ಮಾಡಿದೆ. ಕಳೆದ ಹಲವು ತಿಂಗಳಿನಿಂದ ಪಿಂಚಣಿ ಬಂದಿಲ್ಲ ಎಂದು ಕಚೇರಿಗೆ ಸುತ್ತುವಂತೆ ಮಾಡಿದ್ದು, ಇದನ್ನೇ ನಂಬಿ ಬದುಕುತ್ತಿರುವವರ ಜೀವನ ಬೀದಿಗೆ ಬಿದ್ದಿದೆ. ಅಲ್ಲದೆ, ವಿದ್ಯುತ್ ದರ, ಬಸ್ ಪ್ರಯಾಣ ದರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಮಾರಾಟ ತೆರಿಗೆಯನ್ನೂ ಸಹ ಹೆಚ್ಚಿಸಲಾಗಿದೆ ಎಂದು ಮಲ್ಲಿಕಾರ್ಜುನಪ್ಪ ದೂರಿದರು.

ಗೋಶಾಲೆಗಳನ್ನು ತೆರೆಯಲಿ: ಚಾಮರಾಜನಗರದಿಂದಲೇ ಗೆದ್ದು ಶಾಸಕರಾಗಿ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿರುವ ಪುಟ್ಟರಂಗಶೆಟ್ಟಿ ಅವರು ಸ್ವಕ್ಷೇತ್ರದಲ್ಲಿಯೇ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಲು ವಿಫಲರಾಗಿದ್ದಾರೆ. ಕ್ಷೇತ್ರಾದ್ಯಂತ ಸರ್ಕಾರಿ ಸ್ವಾಮ್ಯದ ಗೋಮಾಳಗಳನ್ನು ಗುರುತಿಸಿ ಒತ್ತುವರಿ ತೆರವು ಮಾಡಿಸಿ, ಜಾನುವಾರುಗಳ ಮೇವಿಗೆ ಅನುಕೂಲ ಮಾಡಿಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಬೇಸಿಗೆ ಕಾಲ ಬರುವುದರಿಂದ ಈಗಲಾದರೂ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕು ಎಂದು ಮಲ್ಲಿಕಾರ್ಜುನಪ್ಪ ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಕೃಷಿ ಯಂತ್ರಗಳು ಹಾಗೂ ಕೃಷಿ ಪರಿಕರಗಳನ್ನು ಖರೀದಿಸಲು ಸುಮಾರು ಮೂರು ವರ್ಷಗಳಿಂದ ಯಾವುದೇ ಸಹಾಯಧನ ನೀಡಿಲ್ಲ. ಚಾಮರಾಜನಗರ ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಮೂಲಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಒಳಚರಂಡಿ, ರಸ್ತೆ ಅಭಿವೃದ್ಧಿ ಹಾಗೂ ದುರಸ್ತಿ ಕೆಲಸಗಳು ನಡೆಯುತ್ತಿಲ್ಲ. ಚಾಮರಾಜನಗರ ತಾಲೂಕಿನಾದ್ಯಂತ ಬರ ಬಂದಿದ್ದು, ಕೆರೆಕಟ್ಟೆಗಳು ಬರಿದಾಗಿವೆ. ಸ್ಥಳೀಯ ಸಚಿವರು ಕೆರೆಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ನೀರು ಹರಿಸಿ ಕೆರೆಗಳನ್ನು ತುಂಬಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.

ಆಲಂಬೂರಿನಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ಚಾಮರಾಜನಗರ ತಾಲೂಕಿನಲ್ಲಿ ಬರುವ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು ಹಾಗೂ ಈ ಕೂಡಲೇ ಏರಿಸಿರುವ ಬೆಲೆಗಳನ್ನು ಇಳಿಸಬೇಕು ಎಂದು ರೈತರು ಹಾಗೂ ಜನಸಾಮಾನ್ಯರ ಪರವಾಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ. ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಎ.ಆರ್. ಬಾಬು, ಮುಖಂಡರಾದ ಎಂ. ರಾಮಚಂದ್ರು, ನೂರೊಂದುಶೆಟ್ಟಿ, ಚುಡಾ ಮಾಜಿ ಅಧ್ಯಕ್ಷರಾದ ಎಸ್. ಬಾಲಸುಬ್ರಮಣ್ಯ, ಕುಲಗಾಣ ಶಾಂತಮೂರ್ತಿ, ಜಿಲ್ಲಾ ವಕ್ತಾರ ಮನೋಜ್‌ಪಟೇಲ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಕೂಡ್ಲೂರು ಶ್ರೀಧರಮೂರ್ತಿ, ಕೆ. ವೀರಭದ್ರಸ್ವಾಮಿ, ಕಿಲಗೆರೆ ಬಸವರಾಜು, ವೈ.ಸಿ. ನಾಗೇಂದ್ರ, ಮಂಜು ಕೋಡಿಉಗನೆ, ನಗರ ಘಟಕದ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಶಿವು ರಾಮಸಮುದ್ರ, ಬುಲೆಟ್ ಚಂದ್ರು, ಬಂಗಾರನಾಯಕ, ಶಿವಣ್ಣ, ಡ್ರೈವರ್ ಮಹದೇವ್, ಎನ್. ಮಂಜುನಾಥ್, ವೀರೇಂದ್ರಸ್ವಾಮಿ ಇತರರು ಇದ್ದರು .