ಎಲ್ಲೇಮಾಳದ ಕಣಿವೆ ಆಂಜನೇಯಸ್ವಾಮಿ ದೇಗುಲದ ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಬಸ್ಸಿನ ಕೆಳಗೆ ಸಿಲುಕಿ ಮೃತಪಟ್ಟಿರುವುದು.
ಹನೂರು: ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲೇಮಾಳದ ಕಣಿವೆ ಆಂಜನೇಯ ಸ್ವಾಮಿ ದೇಗುಲದ ಸಮೀಪದಲ್ಲಿ ಶನಿವಾರ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕನಕಪುರ ಬಿಜ್ಜನಹಳ್ಳಿ ಗ್ರಾಮದ ಪರಮೇಶ್ (43) ಮೃತ. ಇವರು ಟಾರ್ಪಾಲ್ ವ್ಯಾಪಾರಿಯಾಗಿದ್ದು, ಬೆಳಗ್ಗೆ 11ರಲ್ಲಿ ಮ.ಬೆಟ್ಟದ ಭಾಗದಲ್ಲಿ ವ್ಯಾಪಾರ ಮುಗಿಸಿಕೊಂಡು ಹನೂರಿನ ಕಡೆಗೆ ತೆರಳುತ್ತಿದ್ದರು. ಈ ವೇಳೆ ಎಲ್ಲೇಮಾಳ ಸಮೀಪದ ಕಣಿವೆ ಆಂಜನೇಯ ಸ್ವಾಮಿ ದೇಗುಲದ ಬಳಿ ಎದುರು ಬಂದ ಕೆಎಸ್ಸಾರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಬಸ್ಸಿನ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹನೂರು ಸಬ್ ಇನ್ಸ್‌ಪೆಕ್ಟರ್ ರವಿ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು.
ಮೃತ ದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಇರಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಹನೂರು ಪೊಲೀಸರು ಬಸ್ ಹಾಗೂ ಬೈಕ್ ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ. ಘಟನಾ ವೇಳೆ ಈ ಮಾರ್ಗದಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಪೊಲೀಸರು ತೆರೆವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.