ಹನೂರಿನಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯುವ ಸಂಘದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ ಮಾತನಾಡಿದರು. ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಗಣೇಶ ಪ್ರಸಾದ್, ದರ್ಶನ್ ಧ್ರುವನಾರಾಯಣ ಇತರರಿದ್ದರು. 
ಚಾಮರಾಜನಗರ

ಯುವಕರ ಸಬಲೀಕರಣಕ್ಕೆ ಭಾರತ್ ಜೋಡೋ

ಹನೂರು: ಯುವ ಪೀಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಭಾರತ್ ಜೋಡೋ ಯುವ ಸಂಘ ಸಹಕಾರಿ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ಬಳಿಕ ಭಾರತ್ ಜೋಡೋ ಸಂಘದ ಸದಸ್ಯರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಸಾವಿರ ಜನಸಂಖ್ಯೆಗೆ ಒಂದು ರಚಿಸಲಾಗುತ್ತಿದೆ. ಪ್ರತಿ ಸಂಘಕ್ಕೆ ಸರ್ಕಾರದಿಂದ 10 ಲಕ್ಷ ರೂ.ಅನುದಾನ ನೀಡಲಾಗುತ್ತದೆ. ಯುವಕರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕೌಶಲ ತರಬೇತಿ ಪಡೆಯಲು ಹಾಗೂ ಸ್ವಂತ ಉದ್ಯಮ ಆರಂಭಿಸಲು ಸಹಕಾರಿಯಾಗಲಿದೆ. ಆದ್ದರಿಂದ ಸಂಘದಲ್ಲಿ ಯುವ ಪೀಳಿಗೆ ಹೆಚ್ಚು ಸದಸತ್ವ ಪಡೆಯುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಎಂ.ಆರ್ ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ ಪ್ರಸಾದ್, ದರ್ಶನ್ ಧ್ರುವನಾರಾಯಣ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್, ಪಪಂ ಮುಖ್ಯಾಧಿಕಾರಿ ರೇಖಾ ಇನ್ನಿತರರಿದ್ದರು.