ಚನ್ನಾಲಿಂಗನಹಳ್ಳಿಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಈಶ್ವರ್ ಉದ್ಘಾಟಿಸಿದರು. ನ್ಯಾಯಾಧೀಶರಾದ ಕಾವ್ಯಶ್ರೀ, ಎಸ್.ಜೆ ಕೃಷ್ಣ, ರಂಜಿತ್‌ಕುಮಾರ್ ಇತರರಿದ್ದರು.  
ಚಾಮರಾಜನಗರ

ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಜಾಗ್ರತೆ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ
  • ಕಾನೂನು ಅರಿವು ಕಾರ್ಯಕ್ರಮ

ಹನೂರು:

ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ಹಕ್ಕುಗಳಿಗೆ ಧಕ್ಕೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಹೇಳಿದರು.

ತಾಲೂಕಿನ ಚನ್ನಾಲಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಪಾಲಕರು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯ. ಹಾಗೆಯೇ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಗಮನಹರಿಸಬೇಕು. ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕರ ಬಳಕೆ ಕಾನೂನು ಅಪರಾಧವಾಗಿದ್ದು, ಎಚ್ಚರ ವಹಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ ಮಾತನಾಡಿ, ಪಾಲಕರು ಮಕ್ಕಳೊಂದಿಗೆ ಸಮಯ ಕಳೆದು ಮುಕ್ತವಾಗಿ ಮಾತನಾಡಬೇಕು. ಇದರಿಂದ ಸಮಸ್ಯೆಗಳನ್ನು ಹಂಚಿಕೊಳ್ಳಲು ಹಾಗೂ ಪರಿಹರಿಸಲು ಸಾಧ್ಯವಾಗುತ್ತದೆ. ಇನ್ನು ಮಕ್ಕಳು ಹೊಂದಿರುವ ನಿರ್ದಿಷ್ಟ ಗುರಿಯನ್ನು ತಿಳಿದು ಅಗತ್ಯ ಮಾರ್ಗದರ್ಶನದೊಂದಿಗೆ ಉತ್ತೇಜನ ನೀಡಬೇಕು ಎಂದರು.
ನ್ಯಾಯಾಧೀಶ ಎಸ್.ಜೆ.ಕೃಷ್ಣ, ರಂಜಿತ್‌ಕುಮಾರ್, ಹಿರಿಯ ವಕೀಲ ನಾಗರಾಜು, ಸಬ್‌ಇನ್‌ಸ್ಪೆಕ್ಟರ್ ಸಾಹೇಬಗೌಡ, ಗ್ರಾಪಂ ಆಡಳಿತಾಧಿಕಾರಿ ರಂಗನಾಥ್, ಪಿಡಿಒ ಸಿದ್ದರಾಜು ಇತರರು ಇದ್ದರು.