ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಭಾಸ್ಕರ್ ನಾಯಕ್ ಉದ್ಘಾಟಿಸಿದರು. ಶಂಕರನಾರಾಯಣ ಜೋಯಿಸ್, ಎಂ.ಸುಜೀಂದ್ರ, ಆರ್.ಎಂ.ಮಹದೇವಪ್ಪ, ನಿಜಾಮುದ್ದೀನ್, ಕೆ.ಎನ್.ಮಹದೇವಸ್ವಾಮಿ, ಭೈರೇಶ್ ಗಾಣಿಗ್ ಇದ್ದರು.
- ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಶಂಕರನಾರಾಯಣ ಜೋಯಿಸ್ ಸಲಹೆ
ಗುಂಡ್ಲುಪೇಟೆ: ಪ್ರತಿ ಮನೆಯ ಹಿರಿಯರು ಕಣ್ಣಿನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಜತೆಗೆ ತಮ್ಮ ಮಕ್ಕಳು ದೃಷ್ಟಿಹೀನರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಶಂಕರನಾರಾಯಣ ಜೋಯಿಸ್ ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಉದ್ಯಮಿ ಎಂ.ಸುಜೀಂದ್ರ ಹಾಗೂ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಶನಿವಾರ ಪಟ್ಟಣದ ಮಡಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಜನರು ಉತ್ತಮ ಆಹಾರ ಸೇವನೆ, ದುಶ್ಚಟಗಳಿಲ್ಲದ ಬದುಕು ನಡೆಸಿದ್ದರಿಂದ ಇಲ್ಲಿಯವರೆಗೂ ತಮ್ಮ ಆರೋಗ್ಯದ ಜತೆಗೆ ದೃಷ್ಟಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಹಾಗೂ ಪೌಷ್ಟಿಕಾಂಶವಿಲ್ಲದ ಆಹಾರ ಸೇವೆನೆ, ಜೀವನಶೈಲಿಯ ಬದಲಾವಣೆ, ಅತಿಹಾದ ಮೊಬೈಲ್ ಬಳಕೆಯಿಂದ ಚಿಕ್ಕ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಳವಾಗುತ್ತಿವೆ. ಆದ್ದರಿಂದ ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಅನುಗ್ರಹ ಸಂಸ್ಥೆಯ ಸಂಯೋಜಕ ಕೆ.ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದ್ದು ಶ್ರೀಸಾಮಾನ್ಯರ ಕೈಗೆಟುಕದಂತಾಗಿದೆ. ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆ ದಾನಿಗಳು ಹಾಗೂ ಸಂಘಸಂಸ್ಥೆಗಳ ನೆರವಿನಿಂದ ಪ್ರತಿ ತಿಂಗಳ ಮೊದಲ ಶನಿವಾರ ಪಟ್ಟಣದಲ್ಲಿ ಉಚಿತ ತಪಾಸಣಾ ಶಿಬಿರ ಆಯೋಜಿಸಿ ತಜ್ಞ ವೈದ್ಯರಿಂದ ತಪಾಸಣೆ ನಡೆಸುವುದರ ಜತೆಗೆ ಶಸ್ತ್ರಚಿಕಿತ್ಸೆಯನ್ನೂ ಉಚಿತವಾಗಿ ಮಾಡಿಕೊಡುತ್ತಿದೆ ಎಂದು ಹೇಳಿದರು.
ಅರವಿಂದ ಕಣ್ಣಾಸ್ಪತ್ರೆಯ ತಜ್ಞವೈದ್ಯರು ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೊಳಲಾಗಿದ್ದ 22 ರೋಗಿಗಳು ಸೇರಿದಂತೆ 122 ಹೊರರೋಗಿಗಳನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದ 30 ರೋಗಿಗಳನ್ನು ಕೊಯಮತ್ತೂರಿಗೆ ಕರೆದೊಯ್ದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ಶಿಬಿರದ ಆಯೋಜಕ ಎಂ.ಸುಜೀಂದ್ರ, ಉದ್ಯಮಿಗಳಾದ ಆರ್.ಎಂ.ಮಹದೇವಪ್ಪ, ನಿಜಾಮುದ್ದೀನ್, ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ನಿರ್ದೇಶಕರಾದ ಭೈರೇಶ್ ಗಾಣಿಗ್, ಸಿದ್ದಪ್ಪ, ಮಲ್ಲು, ಅನುಗ್ರಹ ಸಂಸ್ಥೆಯ ಕೆ.ರಮೇಶ್, ಚಿಕ್ಕತಾಯಮ್ಮ, ಪುಟ್ಟತಾಯಮ್ಮ, ಮಂಜುನಾಥ್ ಸೇರಿದಂತೆ ಹಲವರು ಇದ್ದರು.