ಚಾಮರಾಜನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಶ್ರೀ ಚನ್ನಬಸವಸ್ವಾಮೀಜಿ ಉದ್ಘಾಟಿಸಿದರು. ಪಿ.ಮರಿಸ್ವಾಮಿ, ಸಿದ್ದಮಲ್ಲಪ್ಪ, ಮೂಡ್ಲುಪುರ ನಂದೀಶ್, ಬಾಲಚಂದ್ರಮೂರ್ತಿ, ಮಹದೇವಸ್ವಾಮಿ ಇತರರು ಇದ್ದರು.
- ಬಸವ ಬಳಗಗಳ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
- 10 ಸಾವಿರಕ್ಕೂ ಹೆಚ್ಚು ಜನರು ಸೇರಿ ಅದ್ದೂರಿಯಾಗಿ ಬಸವಣ್ಣನವರ ಭಾವಚಿತ್ರವನ್ನು ವಿವಿಧ ಜಾನಪದ ಕಲಾತಂಡಗಳ ಜತೆಗೂಡಿ ಮೆರವಣಿ
ಚಾಮರಾಜನಗರ: ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯನ್ನು ಮೇ 22ರಂದು ಅದ್ದೂರಿ ಹಾಗೂ ವೈಭವಯುತವಾಗಿ ಆಚರಿಸಲು ಬಸವ ಬಳಗಗಳ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿ ಬಳಗದ ಗೌರವ ಅಧ್ಯಕ್ಷ ಚನ್ನಬಸವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮುಖಂಡರ ಸಲಹೆ ಹಾಗೂ ಸೂಚನೆ ಪಡೆದು ನಂತರ ಅದ್ದೂರಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.
ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿ ಮೈಸೂರಿನ ರೀತಿ ಎಲ್ಲ ಜಿಲ್ಲೆಯಲ್ಲಿನ ವೀರಶೈವ-ಲಿಂಗಾಯತ ಮಹಾಸಭಾ, ಸಂಘ-ಸಂಸ್ಥೆಗಳೊಡಗೂಡಿ ಬಸವ ಬಳಗಗಳ ಒಕ್ಕೂಟ ರಚಿಸಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಬಸವ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಬಸವ ಜಯಂತಿ ಆಚರಣೆಯ ಯಶಸ್ಸಿಗೆ ಎಲ್ಲರ ಸಹಕಾರ ಮುಖ್ಯ ಎಂದರು.
ಸಿದ್ದಮಲ್ಲೇಶ್ವರ ಮಠದ ವತಿಯಿಂದ ಮೇ 21, 22 ಗ್ರಾಮಾಂತರ ಬಸವ ಜಯಂತಿ ನಡೆಯುತ್ತಿರುವುದರಿಂದ ಶ್ರೀಗಳ ಜತೆಗೂಡಿ ಮೇ 22ರಂದು ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೇರಿ ಅದ್ದೂರಿಯಾಗಿ ಬಸವಣ್ಣನವರ ಭಾವಚಿತ್ರವನ್ನು ವಿವಿಧ ಜಾನಪದ ಕಲಾತಂಡಗಳ ಜತೆಗೂಡಿ ಮೆರವಣಿಗೆ ಮಾಡೋಣ. ಇದಕ್ಕಾಗಿ ಹಣಕಾಸು, ಪ್ರಚಾರ, ಸ್ವಾಗತ ಸೇರಿದಂತೆ ಹಲವು ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯ 5 ತಾಲೂಕಿನ ಮುಖಂಡರು, ಯುವಕರು, ಮಹಿಳಾ ಸಂಘಟನೆಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಬಳಿಕ ಸಿದ್ದಮಲ್ಲೇಶ್ವರ ವಿರಕ್ತ ಮಠದಲ್ಲಿ ಕೊನೆಗೊಳ್ಳಲಿದೆ. ನಂತರ ಶ್ರೀಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಭಕ್ತರು ಹಾಗೂ ಮಠದ ವತಿಯಿಂದ ಎಲ್ಲ ಸಹಕಾರ ನೀಡುವುದಾಗಿ ಚನ್ನಬಸವಸ್ವಾಮೀಜಿ ಭರವಸೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಮುಖಂಡರು ಸಲಹೆ-ಸೂಚನೆ ನೀಡಿದರು. ಸಭೆಯಲ್ಲಿ ಮುಖಂಡರಾದ ಮೂಡ್ಲುಪುರ ನಂದೀಶ್, ಕಾಳನಹುಂಡಿ ಗುರುಸ್ವಾಮಿ, ಎನ್. ಗುರುಸ್ವಾಮಿ, ಬಿಕೆ ರವಿಕುಮಾರ್, ಎನ್‌ರಿಚ್ ಮಹದೇವಸ್ವಾಮಿ, ಶ್ವೇತಾ ಶಶಿಧರ್ ವಸಂತಮ್ಮ, ಸುಧಾ ಮಲ್ಲಣ್ಣ, ಬಾಲಚಂದ್ರಮೂರ್ತಿ, ಮಹದೇವಸ್ವಾಮಿ, ಮಹದೇವಪ್ಪ, ಸೋಮಶೇಖರ್, ಗುರುಪ್ರಸಾದ್, ಆಲೂರು ಮಲ್ಲು, ಗುರು, ದೊಡ್ಡರಾಯಪೇಟೆ ಗಿರೀಶ್, ಸಿದ್ದಮಲ್ಲಪ್ಪ ಸ್ವಾಗತಿಸಿದರು. ಕೆ. ವೀರಭದ್ರಸ್ವಾಮಿ, ಎಲ್, ಸುರೇಶ್ ಜಗದೀಶ್ ಸೇರಿದಂತೆ ಭಾಗವಹಿಸಿದ್ದ ಮುಖಂಡರು ತಮಗೆ ವಹಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವುದಾಗಿ ತಿಳಿಸಿದರು.