ಬಸವ ಜಯಂತಿ ಆಚರಣೆ ಸಂಬಂಧ ಕೊಳ್ಳೇಗಾಲದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಮಹಾ ಸಭಾದಿಂದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಎಂ.ನಂಜುಂಡಸ್ವಾಮಿ ಮಧುವನಹಳ್ಳಿ, ಬಿ.ತೊಟೇಶ್, ಪುಟ್ಟಣ್ಣ, ಬಸಪ್ಪನ ದೊಡ್ಡಿ ಬಸವರಾಜು, ಮಹದೇವ ಪ್ರಸಾದ್ ಇತರರು ಇದ್ದರು.
- ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಕೊಳ್ಳೇಗಾಲ: ಬಸವ ಜಯಂತಿ ಆಚರಣೆ ಸಂಬಂಧ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಮಂಗಳವಾರ ಪಟ್ಟಣದ ಶ್ರೀ ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಸಭೆಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಹಾಸಭಾದ ಗೌರವಾಧ್ಯಕ್ಷ ಹಾಗೂ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಳೆದ ಬಾರಿಯಂತೆಯೇ ಈ ಬಾರಿಯೂ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಆಚರಿಸಬೇಕಿದೆ. ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಮೆರವಣಿಗೆಯನ್ನು ಮಧ್ಯಾಹ್ನ 2 ಗಂಟೆಯ ಬಳಿಕ ಆಯೋಜಿಸಿದರೆ ಭಕ್ತರಿಗೆ ಅನುಕೂಲ ವಾಗಲಿದೆ. ಅಲ್ಲದೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿ ಎಂದು ಸಲಹೆ ನೀಡಿದರು.
ಮಹಾಸಭಾದ ತಾಲೂಕು ಅಧ್ಯಕ್ಷ ಪುಟ್ಟಣ್ಣ ಮಾತನಾಡಿ, ಬಸವ ಜಯಂತಿಯನ್ನು ಸುತ್ತೂರು ಶ್ರೀಗಳ ಆಶೀರ್ವಾದೊಂದಿಗೆ ಅದ್ಧೂರಿಯಾಗಿ ಆಚರಿಸಬೇಕಿದೆ. ಸಮಾಜದ ಎಲ್ಲ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಒಗ್ಗೂಡಿ ಹಬ್ಬವನ್ನು ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಮುಖಂಡರು ಅಭಿಪ್ರಾಯ ತಿಳಿಸಬಹುದು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಮಾತನಾಡಿ, ಸುತ್ತೂರು ಶ್ರೀಗಳು ನಿಗದಿಪಡಿಸಿದ ದಿನಾಂಕದಂದು ಪಟ್ಟಣದಲ್ಲಿ ಬಸವ ಜಯಂತಿ ಆಚರಿಸೋಣ ಎಂದು ಸಲಹೆ ನೀಡಿದರು.
ನಗರಸಭೆ ಮಾಜಿ ಸದಸ್ಯ ಜಿ.ಪಿ.ಶಿವಕುಮಾರ್ ಮಾತನಾಡಿ, ಶಿವಕುಮಾರಸ್ವಾಮಿ ಅವರು ಬಸವ ಜಯಂತಿ ಆಚರಣೆ ಪ್ರಾರಂಭಿಸಿ 25 ವರ್ಷ ಕಳೆದಿದ್ದರಿಂದ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಿಸೋಣ ಎಂದರು. ಬಳಿಕ ಹಲವು ಮುಖಂಡರು ಸಲಹೆ ನೀಡಿದರು.
ಅಂತಿಮವಾಗಿ ಸಭೆಯಲ್ಲಿ ಏ.20 ರಂದು ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿ ಯಶಸ್ವಿ ಗೊಳಿಸಬೇಕು. ಸಮಾಜದ ವತಿಯಿಂದ ಪ್ರತ್ಯೇಕವಾಗಿ ಮಾಡುವ ಬಸವ ಜಯಂತಿ ಆಚರಣೆಗೆ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ದಿನಾಂಕ ಪಡೆದು ತಾಲೂಕಿನ ಎಲ್ಲ ಹರಗೂರು ಚರಮೂರ್ತಿಗಳ ಸಮ್ಮುಖದಲ್ಲಿ, ಜನಪ್ರತಿನಿಧಿಗಳು, ವಿವಿಧ ಕೋಮಿನ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಒಗ್ಗೂಡಿ ಬಸವಣ್ಣನವರ ಭಾವಿಚಿತ್ರವನ್ನುಮೆರವಣಿಗೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಕೆಂಪನಪಾಳ್ಯ ಮಹೇಶ್, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು, ಮಹದೇವ ಪ್ರಸಾದ್, ಬಸವ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಇಂದ್ರಕುಮಾರ್, ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಮಲ್ಲೇಶಪ್ಪ, ಖಜಾಂಚಿ ನಂದೀಶ್, ಕಾರ್ಯದರ್ಶಿ ವೀರಭದ್ರಸ್ವಾಮಿ, ಲಕ್ಕರಸನ ಪಾಳ್ಯ ಮಹೇಶ್, ಕಾಮಗೆರೆ ಮಧು, ಕಿರಣ್, ಮಧುವನಹಳ್ಳಿ ಬಾಲಣ್ಣ ಮತ್ತಿತರಿದ್ದರು.