ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಮಳೆ ಬಿದ್ದಿರುವ ಕಾರಣ ಹಸಿರಾಗಿರುವ ಕಾಡು 
ಚಾಮರಾಜನಗರ

ಸುರಿದ ಮಳೆಯಿಂದ ಹಸಿರಾದ ಬಂಡೀಪುರ

ಪ್ರಮುಖ ಮುಖ್ಯಾಂಶಗಳು

  • ಕಾಳ್ಗಿಚ್ಚಿನ ಆತಂಕ ದೂರ
  • ವನ್ಯಜೀವಿಗಳ ಕಲರವ ಮತ್ತೆ ಆರಂಭ
ಗುಂಡ್ಲುಪೇಟೆ: ಮಳೆಗಾಲಕ್ಕೂ ಮುನ್ನ ಸುರಿದ ಮಳೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಹಸಿರಾಗಿದ್ದು, ಒಂದೆಡೆ ಕಾಳ್ಗಿಚ್ಚಿನ ಆತಂಕ ದೂರವಾಗಿದ್ದರೆ, ಮತ್ತೊಂದೆಡೆ ವನ್ಯಜೀವಿಗಳ ಕಲರವ ಮತ್ತೆ ಆರಂಭವಾಗಿದೆ.
ಪ್ರತಿವರ್ಷ ನವೆಂಬರ್‌ನಿಂದ ಮೆ ತಿಂಗಳವರೆಗೂ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ಆತಂಕ ಉಂಟಾಗಲಿದ್ದು, ಮಳೆಗಾಲ ಆರಂಭದವರೆಗೂ ಹದ್ದಿನ ಕಣ್ಣಿಟ್ಟು ಕಾಡು ಕಾಪಾಡಿಕೊಳ್ಳಲು ಮುಂಚೂಣಿ ಸಿಬ್ಬಂದಿ ಶ್ರಮಿಸುತ್ತಿದ್ದರು. ಆದರೆ, ಈ ಬಾರಿ ಅವಧಿಗೂ ಮುನ್ನವೇ 3-4 ಬಾರಿ ಸುರಿದ ಧಾರಕಾರ ಮಳೆ, ಬೇಸಿಗೆಯಲ್ಲೂ ಅರಣ್ಯ ಹಸಿರಾಗಿದೆ. ಇದರಿಂದ ಸದ್ಯಕ್ಕೆ ಕಾಳ್ಗಿಚ್ಚಿನ ಆತಂಕ ನಿವಾರಣೆಯಾಗಿದೆ. ಆದರೂ ಸೂಕ್ಷ್ಮ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟು ಬೆಂಕಿ ಪ್ರಕರಣಗಳ ತಡೆಗೆ ನಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಮೊದಲ ಹುಲಿ ಸಂರಕ್ಷಿತ ಪ್ರದೇಶ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆ ನಿರ್ವಹಣೆಗಾಗಿ ಈ ಬಾರಿ 2,800 ಕಿ.ಮಿ ಬೆಂಕಿ ರೇಖೆ ನಿರ್ಮಿಸಲಾಗಿತ್ತು. ಡಿಸೆಂಬರ್ ವೇಳೆಗೆ ಫೈರ್‌ಲೈನ್ ಕೆಲಸ ಪೂರ್ಣಗೊಳಿಸಿ, ಜನವರಿ 1ರಿಂದ ಕಾಡಂಚಿನ ಗ್ರಾಮ, ಹಾಡಿಗಳ 475 ಮಂದಿ ಫೈರ್ ವಾಚರ್ಸ್‌ ನಿಯೋಜಿಸಿ, ಕಾಡ್ಗಿಚ್ಚು ತಡೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ದಿನದ 24 ಗಂಟೆಯೂ ಕಾಡಂಚಿನ ಗ್ರಾಮಗಳ ಬಳಿ ಅರಣ್ಯ ಪ್ರದೇಶಕ್ಕೆ ಅಕ್ರಮ ನುಸುಳುವಿಕೆ ಪರಿಶೀಲನೆ ಸೆನ್ಸಾರ್ ಬೇಸ್ಡ್ ಕ್ಯಾಮರಾ, ಸಿಸಿ ಕ್ಯಾಮರಾ, ಥರ್ಮಲ್ ಡ್ರೋನ್ ಮೂಲಕ ಪರಿಶೀಲಿಸಲಾಗುತ್ತಿತ್ತು. ಇದರೊಂದಿಗೆ ಆಯಕಟ್ಟಿನ ಸ್ಥಳದಲ್ಲಿ ನಿರ್ಮಿಸಿರುವ ವಾಚ್ ಟವರ್ಸ್‌ ಮೂಲಕ ಹಗಲಿರುಳು ಅರಣ್ಯ ಸಂರಕ್ಷಣೆಗೆ ವೀಕ್ಷಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತು.
ವರದಾನವಾದ ಮಳೆ: ಪ್ರತಿವರ್ಷವೂ ಜನವರಿ ಮತ್ತು ಫೆಬ್ರವರಿಯಲ್ಲಿ ಸಾಂಪ್ರದಾಯಿಕ ಮಳೆ ಬರುವ ವಾಡಿಕೆಯಿದೆ. ಆದರೆ, ಈ ಬಾರಿ ಸಾಂಪ್ರದಾಯಿಕ ಮಳೆಯೊಂದಿಗೆ 3-4 ಬಾರಿ ಸುರಿದ ಧಾರಾಕಾರ ಮಳೆ ಒಣಗಿ ಬೆಂಡಾಗಿದ್ದ ಬಂಡೀಪುರ ಕಾಡಿಗೆ ಸಂಜೀವಿನಿಯಂತೆ ಮರುಜೀವ ನೀಡಿದೆ. ಇದರಿಂದ ಅರಣ್ಯ ಪ್ರದೇಶದ ಬಹುಪಾಲು ಪ್ರದೇಶ ಹಸಿರು ಆವರಿಸಿದ್ದು, ಸಸ್ಯಹಾರಿ ಪ್ರಾಣಿಗಳಾದ ಆನೆ, ಕಾಡೆಮ್ಮೆ, ಸಾಂಬರ್, ಜಿಂಕೆ, ಕಾಡು ಕುರಿ ಸೇರಿದಂತೆ ವಿವಿಧ ಪ್ರಾಣಿಗಳು ಹಸಿರು ಆವರಿಸಿರುವ ಅರಣ್ಯ ಪ್ರದೇಶದಲ್ಲಿ ಲವಲವಿಕೆಯಿಂದ ಓಡಾಡುತ್ತಿವೆ. ಅದರಲ್ಲೂ ಸಫಾರಿ ವಲಯದಲ್ಲಿ ಆನೆ, ಕಾಡೆಮ್ಮೆಗಳ ಹಿಂಡು ದರ್ಶನವಾಗುತ್ತಿದ್ದು, ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.
ನೀರಿನ ಕೊರತೆಯಿಲ್ಲ: ಬಂಡೀಪುರ ಅರಣ್ಯದಲ್ಲಿ ಈ ಬಾರಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿಲ್ಲ. ಅರಣ್ಯದಲ್ಲಿ ಒಟ್ಟು 420 ಕೆರೆಗಳಿದ್ದು, ಅವುಗಳಲ್ಲಿ ಕೆಲವೆ ಕೆಲವು ಕೆರೆಗಳಲ್ಲಿ ಬತ್ತಿ ಹೊಗಿದ್ದರೂ, ಉಳಿದ ಕೆರೆಗಳಲ್ಲಿ ಇನ್ನು ನೀರಿದೆ. ಅಲ್ಲದೆ, ವಿವಿಧ ವಲಯ ವ್ಯಾಪ್ತಿಯಲ್ಲಿರುವ 42 ಕೆರೆಗಳಿಗೆ ಸೋಲಾರ್ ಬೋರ್‌ವೆಲ್ ಅಳವಡಿಸಲಾಗಿದ್ದು, ಅ ಕೆರೆಗಳಲ್ಲಿ ವರ್ಷವಿಡಿ ನೀರಿರುತ್ತವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಳಿಜಾರು ಪ್ರದೇಶದಲ್ಲಿರುವ ಕೆರೆಗಳಿಗೆ ನೀರು ಹರಿದು ಬಂದಿದ್ದು, ಸದ್ಯದ ಮಟ್ಟಿಗೆ ವನ್ಯಜೀವಿಗಳಿಗೆ ನೀರಿನ ಕೊರತೆ ಇಲ್ಲದಂತಾಗಿದೆ.