ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಣಿಸಿದ್ದ ಹುಲಿಗಳು
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಷಿಸಿದ್ದ ವಿಶ್ವ ದೊಡ್ಡ ಬೆಕ್ಕು ಮೈತ್ರಿ
- ಸಿಂಹ, ಹುಲಿ, ಚಿರತೆ ಸಂರಕ್ಷಣೆಯ ಸಭೆಯಲ್ಲಿ ಭಾಗಿಯಾಗಲಿರುವ 23 ದೇಶಗಳ ಪ್ರತಿನಿಧಿಗಳು
- ಫೆ.9ರಿಂದ 11ವರಗೆ ಬಂಡೀಪುರ, 12 ಮತ್ತು 13ರಂದು ನಾಗರಹೊಳೆಯಲ್ಲಿ ಮೀಟಿಂಗ್
ಚಾಮರಾಜನಗರ: ದೇಶದಲ್ಲಿ ಮೊದಲ ಬಾರಿಗೆ ಹುಲಿ ಯೋಜನೆ ಘೋಷಣೆಯಾದ 9 ಕಾಡುಗಳಲ್ಲಿ ಒಂದಾದ ಬಂಡೀಪುರ ಇದೀಗ 23 ದೇಶಗಳು ಪಾಲ್ಗೊಳ್ಳುತ್ತಿರುವ ಭಾರತದ ಮೊದಲ ‘ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಬೆಕ್ಕು ಮೈತ್ರಿ ಶೃಂಗಸಭೆಗೆೆ (ವರ್ಲ್ಡ್ ಬಿಗ್ ಕ್ಯಾಟ್ಸ್ ಅಲೆಯನ್ಸ್-ಐಬಿಸಿಎ)’ ಸಜ್ಜುಗೊಂಡಿದೆ.
ಹುಲಿಗಳ ಸಂರಕ್ಷಣೆಯ ಉದ್ದೇಶದಿಂದ 1973ರ ಏ.9ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಭಾರತದ ಮೊದಲ ಹುಲಿ ಯೋಜನೆ ಘೋಷಿಸಿದರು. ದೇಶದ 9 ಪ್ರದೇಶಗಳಲ್ಲಿ ಕರ್ನಾಟಕದ ಬಂಡೀಪುರದಲ್ಲೂ ಈ ಯೋಜನೆ ಜಾರಿಯಾಗಿ 2023ರಕ್ಕೆ 50 ವರ್ಷಗಳ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಬಂಡೀಪುರಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿ ಭೇಟಿ ನೀಡಿದ್ದರು. ಬಳಿಕ ಮೈಸೂರಿಗೆ ತೆರಳಿ ‘ಅಂತಾರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿ’ ಉದ್ಘಾಟಿಸಿದ್ದರು. ಈ ಮೈತ್ರಿಯ ಮೊದಲ ಶೃಂಗಸಭೆ ಫೆ.9ರಿಂದ 11ರವರೆಗೆ ಬಂಡೀಪುರದಲ್ಲಿ ನಡೆಯಲಿದೆ.
ಶೃಂಗಸಭೆಯಲ್ಲಿ ರಷ್ಯಾ, ಶ್ರೀಲಂಕಾ, ಕಾಂಗೋ, ಭೂತಾನ್, ಮಲೇಷ್ಯಾ, ಕಾಂಬೋಡಿಯಾ, ಕಜಕಿಸ್ತಾನ್, ಮೆಕ್ಸಿಕೋ, ಮಂಗೋಲಿಯಾ, ಸೇರಿ ಒಟ್ಟು 23 ದೇಶಗಳ ಅರಣ್ಯ ಇಲಾಖೆಯ ಅಧಿಕಾರಿಗಳು, ವನ್ಯಜೀವಿ ತಜ್ಞರು, ಸಂಶೋಧಕರು ಪಾಲ್ಗೊಳ್ಳುತ್ತಿದ್ದಾರೆ. ಫೆ.12 ಮತ್ತು 13ರಂದು ಮೈಸೂರಿನ ನಾಗರಹೊಳೆ ಅಭಯಾರಣ್ಯದಲ್ಲೂ ಶೃಂಗಸಭೆ ನಡೆಯಲಿದೆ.
ಮೋದಿ ಚಾಲನೆ ಕೊಟ್ಟ ‘ದೊಡ್ಡ ಬೆಕ್ಕು ಮೈತ್ರಿ’:
2023ರಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಬಂಡೀಪುರಕ್ಕೆ ಭೇಟಿ ನೀಡಿದ್ದರು. ಇಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಸಾರಿ ಮಾಡಿ ನಂತರ ಮೈಸೂರಿಗೆ ತೆರಳಿ ಅಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದರು. ಇದೇ ವೇಳೆ 2023ರಲ್ಲಿ ಬಂಡೀಪುರಕ್ಕೆ ಬಂದು ಸಾರಿ ಮಾಡಿ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರಮೋದಿ ಅಂತಾರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿ (ಐಬಿಸಿಎ) ಉದ್ಘಾಟಿಸಿದ್ದರು. ‘ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್, ಚೀನಾ ಸೇರಿದಂತೆ ವಿಶ್ವದ 7 ಪ್ರಮುಖ ದೊಡ್ಡ ಬೆಕ್ಕು ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆಯ ಕಡೆ ಐಬಿಸಿಎ ಗಮನವಿರುತ್ತದೆ. ಈ ಜಾತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿರುವ ದೇಶಗಳು ಈ ಮೈತ್ರಿಗೆ ಸೇರಲು ಅವಕಾಶವಿದೆ’ ಎಂದಿದ್ದರು.
‘ಹುಲಿಗಳ ನಾಡಿ’ನಲ್ಲಿ ಭಾರತದ ಮೊದಲ ಶೃಂಗಸಭೆ..:
ದೇಶದಲ್ಲಿ ಹುಲಿಗಳ ಸಂಖ್ಯೆ ಅಧಿಕವಾಗಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಪ್ರಥಮ. ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಂಡೀಪುರ ಅಗ್ರಸ್ಥಾನ ಪಡೆದುಕೊಂಡಿದೆ. ಹುಲಿ ಯೋಜನೆ ೋಷಣೆಯಾಗಿ 50 ವರ್ಷ ಪೂರೈಸಿರುವ, ದೊಡ್ಡ ಬೆಕ್ಕು ಜಾತಿಗೆ ಸೇರಿರುವ ಹುಲಿ, ಚಿರತೆಗಳ ಸಂಕರ‌್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕಾರಣ ಬಂಡೀಪುರದಲ್ಲಿ ಭಾರತದ ಮೊದಲ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಬಜೆಟ್‌ನಲ್ಲಿ ಘೋಷಣೆ:
ಅಂತಾರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 9ನೇ ಮತ್ತು 2026-27ನೇ ಸಾಲಿನ ಯೋಜನೆಯಾಗಿದೆ. ಬಿಗ್ ಕ್ಯಾಟ್ ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಚರ್ಚೆ ಮಾಡಲು ಈ ವರ್ಷ ಮೊದಲ ಬಾರಿಗೆ ಶೃಂಗಸಭೆ ಏರ್ಪಡಿಸಲಾಗುವುದು ಎಂದು ೋಷಿಸಿದ್ದರು. ಹೀಗಾಗಿ ಬಂಡೀಪುರದಲ್ಲಿ ಆಯೋಜಿಸಿರುವ ಈ ಶೃಂಗಸಭೆ ಭಾರತದ ಮೊದಲ ಶೃಂಗಸಭೆಯಾಗಿದೆ.
ಶೃಂಗಸಭೆಯಲ್ಲೇನು ನಡೆಯಲಿದೆ?:
ಫೆ.8ರಂದು ಬೆಂಗಳೂರಿನ ಖಾಸಗಿ ಹೋಟೇಲ್‌ನಲ್ಲಿ ಶೃಂಗಸಭೆ ಉದ್ಘಾಟನೆಗೊಳ್ಳಲಿದೆ. ಫೆ..9ರಿಂದ 11ರವರೆಗೆ ಬಂಡೀಪುರದಲ್ಲಿ ಸಭೆ ನಡೆಯಲಿದೆ. ಅರಣ್ಯ ಇಲಾಖೆಯ ಮೇಲುಕಾಮನಹಳ್ಳಿಯ ಸಭಾಭವನದಲ್ಲಿ ಮೀಟಿಂಗ್ ನಡೆಯಲಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಘೋಷಣೆಯಾಗಿ 50 ವರ್ಷಗಳ ಅವಧಿಯ ಪಯಣ, ಅರಣ್ಯ ಭೇಟಿ, ಹುಲಿ, ಚಿರತೆಗಳ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕೈಗೊಂಡಿರುವ ಕ್ರಮಗಳು ಬಗ್ಗೆ ಬೇರೆ ದೇಶದ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೇ, ಇವರಿಂದಲೂ ಮಾಹಿತಿಗಳನ್ನು ತಿಳಿದುಕೊಳ್ಳಲಾಗುತ್ತದೆ ಎಂದು ಬಂಡೀಪುರ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಬಂಡೀಪುರದಲ್ಲಿ ಫೆ.9ರಿಂದ 11ರವರೆಗೆ ನಡೆಯಲಿರುವ ಶೃಂಗಸಭೆಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಹುಲಿ ಯೋಜನೆ ಘೋಷಣೆಯಾದ 50 ವರ್ಷಗಳಲ್ಲಿ ಮಾಡಿರುವ ಸಂರಕ್ಷಣೆಯನ್ನು ಬೇರೆ ದೇಶದ ಪ್ರತಿನಿಧಿಗಳಿಗೆ ವಿವರಿಸಲಾಗುವುದು. ಅವರ ರಾಷ್ಟ್ರದಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿಗಳನ್ನು ತಿಳಿದುಕೊಳ್ಳಲಾಗುತ್ತದೆ. ಸಮಸ್ಯೆ, ಸವಾಲುಗಳು, ಪರಿಹಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು.
ಪ್ರಭಾಕರನ್, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ