ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು. ಹೋರಾಟಗಾರರಾದ ಚಾ.ರಂ.ಶ್ರೀನಿವಾಸ ಗೌಡ, ರಾಜು, ನಿಜಧ್ವನಿ ಗೋವಿಂದರಾಜು, ಲೋಕೇಶ್, ಲಿಂಗರಾಜು, ಮಹದೇವನಾಯಕ ಇತರರು ಹಾಜರಿದ್ದರು.
- ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಿಂದ ಧರಣಿ
- ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶಕ್ಕೆ ವಿರೋಧ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ತಾಲೂಕುಗಳಲ್ಲಿ ಬೆಳಗ್ಗೆಯವರೆಗೂ ಬಂದ್ ವಾತಾವರಣದ ಬಿಸಿ ಇತ್ತು. ನಂತರ ಜನ ಸಂಚಾರ ಎಂದಿನಂತೆ ಕಂಡಿತು. ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ಶುರು ಮಾಡಿದವು. ಮಧ್ಯಾಹ್ನದ ವೇಳೆಗೆ ಬಂದ್‌ನ ಛಾಯೆಯೇ ಇರಲಿಲ್ಲ. ಸಹಜ ದಿನಗಳ ವಾತಾವರಣ ಮನೆ ಮಾಡಿತು. ಶಾಲೆ-ಕಾಲೇಜುಗಳಿಗೆ ರಜೆ ೋಷಣೆ ಮಾಡಿರಲಿಲ್ಲ. ಕೂಲಿ ಕಾರ್ಮಿಕರು, ಸರ್ಕಾರಿ ಕಚೇರಿ ನೌಕರರು, ಬೀದಿ ಬದಿ ವ್ಯಾಪಾರಿಗಳ ಇತರ ವಲಯಗಳ ಕೆಲಸ ಕಾರ್ಯಗಳಿಗೆ ಅಡಚಣೆಯುಂಟಾಗಲಿಲ್ಲ. ಕೆಎಸ್‌ಆರ್‌ಟಿಸಿ ಬಸ್, ಆಟೋಗಳ ಸಂಚಾರ ಎಂದಿನಂತೆ ಇತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ವೃತ್ತಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ತಂಡ ಮೊಕ್ಕಾಂ ಹೂಡಿತ್ತು.
ಸಂಘಟನೆಗಳಿಂದ ಪ್ರತಿಭಟನೆ: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಇಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ಕಡ್ಲೆಪುರಿ, ಅರಿಶಿಣ, ಕುಂಕುಮ ಎರಚಿ ಧರಣಿ ನಡೆಸಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದಲ್ಲಿ ಬರ ತಾಂಡವವಾಡುತ್ತಿದೆ. ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ವಾಸ್ತವ ಪರಿಸ್ಥಿತಿ ಅರಿಯದ ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿರುವುದು ಖಂಡನೀಯ. ಇದರಿಂದ ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ. ಪ್ರತಿ ಸಲ ತಮಿಳುನಾಡು ಪರ ಆದೇಶ ಹೊರಡಿಸುವ ಮಂಡಳಿ ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೀರಭದ್ರ, ಮಂಜು, ತಾಂಡವಮೂರ್ತಿ, ಮಹದೇವನಾಯಕ, ರಮೇಶ್‌ಗೌಡ, ಮಹೇಶ್ ಗೌಡ, ಲೋಕೇಶ್, ಲಿಂಗರಾಜು, ರಾಚಪ್ಪ, ನಿಜಧ್ವನಿ ಗೋವಿಂದರಾಜು, ರಾಜು ಇದ್ದರು.