ಹನೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಾ. ಬಾಬು ಜಗಜೀವನರಾಮ್ ಜಯಂತಿಯನ್ನು ಆಚರಿಸಲಾಯಿತು. ಶಾಸಕ ಎಂ.ಆರ್ ಮಂಜುನಾಥ್, ಕೆ.ಎನ್ ಚೈತ್ರಾ, ಉಮೇಶ್, ಆನಂದಮೂರ್ತಿ ಇತರರಿದ್ದರು.
ಹನೂರು : ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರು ಸಮುದಾಯಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ. ಬಾಬೂಜಿ ಅವರು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಹೋರಾಟ ನಡೆಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ನಾಯಕ. ಇವರು ಹೋರಾಟಗಾರಷ್ಟೇ ಅಲ್ಲ. ಸಮಾಜ ಸೇವಕರು ಆಗಿದ್ದು, ಕಾರ್ಯ ವೈಖರಿಯಿಂದಲೇ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಪಡೆದರು. ನೆಹರು ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಮುರಾರ್ಜಿ ದೇಸಾಯಿ ಆಡಳಿತದಲ್ಲಿ ಉಪ ಪ್ರಧಾನಿಯಾಗಿದ್ದರು. ಕೃಷಿ, ರಕ್ಷಣೆ, ಕೈಗಾರಿಕೆ ಹಾಗೂ ಇತರೆ ಖಾತೆಯ ಸಚಿವರಾಗಿ ದಕ್ಷತೆಯಿಂದ ನಿಭಾಯಿಸಿದ್ದು, ದೇಶದ ಅಭಿವೃದ್ಧಿಗೆ ದೂರದೃಷ್ಟಿ ಉಳ್ಳವರಾಗಿದ್ದರು. ದೇಶದಲ್ಲಿ 1974ರಲ್ಲಿ ಬರ ಪರಿಸ್ಥಿತಿ ಎದುರಾದ ವೇಳೆ ಆಹಾರ ಉತ್ಪಾದನೆ ಹೆಚ್ಚಿಸುವುದರ ಜತೆಗೆ ರೈತರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರಣಕರ್ತರಾಗಿದ್ದಲ್ಲದೆ ಹಸಿರು ಕ್ರಾಂತಿಯ ಪಿತಾಮಹ ಎಂದೆನಿಸಿಕೊಂಡರು. ಆದ್ದರಿಂದ ಇವರ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಇವರ ಜಯಂತಿಯಲ್ಲಿ ರಾಜಕೀಯ ಸಲ್ಲದು ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ ಮಾತನಾಡಿ, ಪಟ್ಟಣದಲ್ಲಿನ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಸಮರ್ಪಕ ಸೌಕರ್ಯವಿಲ್ಲದ ಪರಿಣಾಮ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಇದಕ್ಕೂ ಮುನ್ನಾ ಶಿಕ್ಷಕ ಸಿದ್ದಯ್ಯ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ, ತಾಪಂ ಇಒ ಉಮೇಶ್, ಸೆಸ್ಕ್ ಎಇಇ ರಂಗಸ್ವಾಮಿ, ಇನ್ಸ್‌ಪೆಕ್ಟರ್ ಆನಂದಮೂರ್ತಿ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಶಿಕ್ಷಣ ಸಂಯೋಜಕ ಮಹೇಶ್, ಮುಖಂಡರಾದ ಗುರುಸ್ವಾಮಿ, ಗೋವಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.
ಆದಿಜಾಂಬವ ಕಾಲನಿಯಲ್ಲಿ ಆಚರಣೆ:
ಪಟ್ಟಣದ ಆದಿಜಾಂಬವ ಕಾಲನಿಯಲ್ಲಿ ಡಾ. ಬಾಬು ಜಗಜೀವನರಾಮ್ ಕಲಾ ಯುವಕರ ಸಂಘದ ವತಿಯಿಂದ ಬಾಬೂಜಿ ಜಯಂತಿ ಆಚರಿಸಲಾಯಿತು. ಪಪಂ ಮಾಜಿ ಸದಸ್ಯ ಸುದೇಶ್ ಅವರು ಜಯಂತಿ ಸಂಬಂಧ ಮಾತನಾಡಿದರು. ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಗವಿಸಿದ್ಧ, ಕಾರ್ಯದರ್ಶಿ ದೊರೆಸ್ವಾಮಿ, ಮುಖಂಡರಾದ ರಘು, ಸಿದ್ದರಾಜು, ಮಾದೇವ, ಗುರುಸ್ವಾಮಿ, ಗೋವಿಂದ ಇತರರಿದ್ದರು.