ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಆಯ್ಕೆಯಾಗಿರುವ ಚಾಮರಾಜನಗರದ ಆದರ್ಶ ವಿದ್ಯಾಲಯ
- 2 ಆದರ್ಶ ವಿದ್ಯಾಲಯ, 3 ಸರ್ಕಾರಿ ಶಾಲೆಗಳಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ
- ಸ್ಕೂಲ್ ಅಭಿವೃದ್ಧಿಗೆ ಸಾಥ್ ಕೊಡುತ್ತಿರುವ ಸಮಿತಿ
ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಶಾಲೆಯಗಳಲ್ಲಿ ಉತ್ತಮವಾರಿ ಕಾರ್ಯ ನಿರ್ವಹಿಸುತ್ತಿರುವ 5 ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) 1 ಲಕ್ಷ ರೂ. ನಗದು ಬಹುಮಾನ ಒಲಿದು ಬಂದಿದೆ.
ಎಸ್‌ಡಿಎಂಸಿಗಳು ಶಾಲೆಯ ಮೇಲ್ವಿಚಾರಣೆ ಮತ್ತು ಪಾಲಕರ ಸಹಭಾಗಿತ್ವದ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ಹೀಗಾಗಿ ಶಿಕ್ಷಣ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುವ ಎಸ್‌ಡಿಎಂಸಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾವಾಹಿನಿ ಪೋರ್ಟಲ್‌ನ ಸಮೀಕ್ಷೆ ನಡೆಸಿದೆ. ಇದರಲ್ಲಿ ಆಯ್ಕೆ ಮಾಡಿದ ಜಿಲ್ಲೆಯ 5 ಶಾಲೆಗಳಿಗೆ 2025-26ನೇ ಸಾಲಿನ ಉತ್ತಮ ಎಸ್‌ಡಿಎಂಸಿಗಳು ಎಂದು ಗುರುತಿಸಿ ತಲಾ 1 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಯಾವ ಶಾಲೆಗಳು ಆಯ್ಕೆ: ಉತ್ತಮ ಎಸ್‌ಡಿಎಂಸಿಗಳಾಗಿ ಗುರುತಿಸಿಕೊಂಡಿರುವ ಜಿಲ್ಲೆಯ 5 ತಾಲೂಕುಗಳ ಎಸ್‌ಡಿಎಂಸಿಗಳಲ್ಲಿ ಚಾಮರಾಜನಗರದ ಮಲ್ಲಯ್ಯನಪುರದ ಆದರ್ಶ ವಿದ್ಯಾಲಯ, ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಸರ್ಕಾರಿ ಪ್ರೌಢಶಾಲೆ, ಯಳಂದೂರು ತಾಲೂಕಿನ ಮದ್ದೂರಿನ ಸರ್ಕಾರಿ ಪ್ರೌಢಶಾಲೆ, ಕೊಳ್ಳೇಗಾಲದ ಮುಡಿಗುಂಡದ ಆದರ್ಶ ವಿದ್ಯಾಲಯ, ಹನೂರು ತಾಲೂಕಿನ ರಾಮಾಪುರದ ಸರ್ಕಾರಿ ಪ್ರೌಢಶಾಲೆ(ಬಾಲಕರು) ಆಯ್ಕೆಯಾಗಿವೆ.
ಸಿಕ್ಕಿರುವ ಅನುದಾನದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ಮೂಲಸೌಕರ್ಯಗಳಾದ ಪ್ರಯೋಗಾಲಯ, ಇಕೋ ಕ್ಲಬ್ ಚಟುವಟಿಕೆ, ಕಲಿಕಾ ಮೇಳಗಳು, ಉದ್ಯೋಗ ಮೇಳ, ಇಂಟರ್‌ನೆಟ್ ಸೌಲಭ್ಯ, ಯುಪಿಎಸ್, ಸಿಸಿಟಿವಿ ಕ್ಯಾಮರಾ ಮತ್ತು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಅದಕ್ಕಾಗಿ ಎಸ್‌ಡಿಎಂಸಿಗಳ ಸಭೆ ನಡೆಸಿ ನಿರ್ಣಯ ಕೈಗೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದನೆ ಪಡೆದು ನಿಯಮಾನುಸಾರ ಅನುದಾನ ಬಳಕೆ ಮಾಡಲು ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಆಯ್ಕೆಯಾಗಿರುವ 5 ಎಸ್‌ಡಿಎಂಸಿಗಳು ಜಿಲ್ಲೆಯ ಇತರೆ ಶಾಲೆಗಳ ಎಸ್‌ಡಿಎಂಸಿಗಳಿಗೆ ಮಾದರಿಯಾಗಿವೆ. ಚಾಮರಾಜನಗರದ ಮಲ್ಲಯ್ಯನಪುರದ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಶಾಲೆಯ ಚಿತ್ರಣವನ್ನೇ ಬದಲಾಯಿಸುತ್ತಿದೆ. ಖಾಸಗಿ ಶಾಲೆಗಳಂತೆ ಈ ಶಾಲೆಯ ವಿದ್ಯಾರ್ಥಿಗಳೂ ಸಮವಸ ತೊಡುತ್ತಿದ್ದಾರೆ.
ಪ್ರಯೋಗಾಲಯಕ್ಕೆ ಬಣ್ಣ ಹೊಡೆಸಿರುವುದು, ವಿದ್ಯಾರ್ಥಿಗಳಿಗೆ ಕೈತೊಳೆಯುವ ತೊಟ್ಟಿ, ಟೇಬಲ್, ಶೋಕೇಸ್, ದಾನಿಗಳಿಂದ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಿಕೊಡಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಶೈಕ್ಷಣಿಕವಾಗಿ ಸಹಕಾರ, ದಾನಿಗಳಿಂದ ಕೊಡುಗೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಥ್ ನೀಡುತ್ತಿದೆ. ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಸದಸ್ಯರು, ಪಾಲಕರು ಅತಿಥಿ ಶಿಕ್ಷಕರಿಗೆ ಅಧಿಕ ಸಂಬಳ ಕೊಡುತ್ತಿದ್ದಾರೆ. ಕುಡಿಯುವ ನೀರಿನ ಫಿಲ್ಟರ್ ಕೊಡಿಸಿದ್ದಾರೆ. ಪೋಡಿಯಂ, ಮೈಕ್, ಅನ್ನ-ಸಾಂಬಾರ್ ಬಡಿಸುವ ಟ್ರ್ಯಾಲಿ, 500 ಕುರ್ಚಿಗಳು, ಅದಾನಿ ಗ್ರೂಪ್ ಕಡೆಯಿಂದ 375 ಮೀಟರ್ ಕಾಂಪೌಂಡ್ ಕಟ್ಟಿಸಿಕೊಟ್ಟಿದ್ದಾರೆ. ಹನೂರು ತಾಲೂಕಿನ ರಾಮಾಪುರದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ತಂಡ ಕಾರ್ಯಕ್ರಮ, ಸಭೆಗಳಿಗೆ ತಪ್ಪದೇ ಹಾಜರಾಗುತ್ತಾರೆ. ಶಾಲೆಗೆ ಬೇಕಾದ ಸಾಮಗ್ರಿಗಳನ್ನು ತಂದುಕೊಡುತ್ತಾರೆ. ಮಕ್ಕಳ ವಿಚಾರದಲ್ಲೂ ಕಾಳಜಿ ವಹಿಸುತ್ತಿದ್ದಾರೆ. ಶಾಲೆಗೆ ಬಾರದ ವಿದ್ಯಾರ್ಥಿ ಮನೆಗೆ ಭೇಟಿ ನೀಡುವ ಶಿಕ್ಷಕರೊಂದಿಗೆ ಎಸ್‌ಡಿಎಂಸಿ ತಂಡವೂ ತೆರಳುತ್ತದೆ. ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಕೂಡ ಶೈಕ್ಷಣಿಕ ಮತ್ತು ಭೌತಿಕ ಪ್ರಗತಿಗೆ ಸಹಕಾರಿಯಾಗಿದೆ.
ಕೊಳ್ಳೇಗಾಲದ ಆದರ್ಶ ಶಾಲೆಯ ಎಸ್‌ಡಿಎಂಸಿ ತಂಡ ಶೈಕ್ಷಣಿಕ ಅಭ್ಯುದಯಕ್ಕೆ ತುಂಬಾ ಸಹಕಾರ ನೀಡುತ್ತಿದೆ. ಭೌತಿಕ ಅಭಿವೃದ್ಧಿಗೂ ಹೆಗಲು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಸ್‌ಡಿಎಂಸಿ ತಂಡದವರು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರ ಕೊಡುಗೆ ಅಪಾರವಾಗಿದೆ. ಅಮೂಲ್ಯವಾದ ಸಮಯ ಮತ್ತು ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ. ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಪರಿಶ್ರಮದಿಂದ ಉತ್ತಮ ಎಸ್‌ಡಿಎಂಸಿಯಾಗಿ ಆಯ್ಕೆಯಾಗಿದೆ.