ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು. ಡಿಸಿ ಶ್ರೀರೂಪಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ, ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕರಾದ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು ಇತರರು ಹಾಜರಿದ್ದರು. 
ಚಾಮರಾಜನಗರ

ಬಾಲ ಕಾರ್ಮಿಕ ಮುಕ್ತ ಗ್ರಾಮಗಳಿಗೆ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿಕೆ
  • ಜೂ.12ರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ ಸಿದ್ಧತೆ ಸೂಚನೆ
ಚಾಮರಾಜನಗರ: ವಿವಿಧ ಇಲಾಖೆಗಳು, ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಕಾರ್ಮಿಕ ಸಂಘಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಜೂ.12ರಂದು ಜಿಲ್ಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊರ್ಳಳುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ವಿರುದ್ದ ಬಲವಾದ ಜನಾಭಿಪ್ರಾಯ ರೂಪುಗೊಳಿಸುವ ದಿಸೆಯಲ್ಲಿ ಶಿಷ್ಠಾಚಾರದನ್ವಯ ಕಾರ್ಯಕ್ರಮ ಆಯೋಜನೆ ಮಾಡಬೇಕು. ಬಾಲಕಾರ್ಮಿಕ ಪದ್ದತಿ ವಿರುದ್ದ ಆಂದೋಲನ ನಡೆಸುತ್ತಿರುವ ಸಂಘ ಸಂಸ್ಥೆಗಳು, ಉದ್ಯೋಗದಾತರ ಸಂಘಗಳು, ಸಾಮಾಜಿಕ ಕಾರ್ಯಕರ್ತರನ್ನು ಆಹ್ವಾನಿಸಬೇಕು ಎಂದರು.
ಜೂ.12ರಂದು ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೇ ಒಟ್ಟಾಗಿ ಸೇರಿ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಶಾಲಾ, ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸಹ ಪ್ರಮಾಣ ವಚನ ಸ್ವೀಕರಿಸಲು ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ದತಿಯ ಕುರಿತು ಜಾಗೃತಿ ಮೂಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಎನ್.ಸಿಸಿ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಅರಿವು ಜಾಥಾ ಏರ್ಪಡಿಸಬೇಕು. ಬಾಲಕಾರ್ಮಿಕ ಪದ್ದತಿ ವಿರೋಧಿ ಕುರಿತು ಘೋಷಣೆಗಳನ್ನು ಮೊಳಗಿಸಬೇಕು. ಬಾಲ ಹಾಗೂ ಕಿಶೋರ ಕಾರ್ಮಿಕ ಮುಕ್ತ ಗ್ರಾಮಗಳನ್ನು ಗುರುತಿಸಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಬೇಕು ಎಂದರು.
ಬಾಲಕಾರ್ಮಿಕ ವಿರೋಧಿ ದಿನದ ಮಹತ್ವ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಬೇಕು. ಶಾಲೆಗಳು ಆರಂಭವಾಗುತ್ತಿದ್ದಂತೆಯೇ ಸೂಕ್ತ ದಿನಾಂಕ ನಿಗದಿ ಮಾಡಿ ಸ್ಪರ್ಧೆಗಳನ್ನು ನಡೆಸಬೇಕು. ಬಾಲ ಹಾಗೂ ಕಿಶೋರ ಕಾರ್ಮಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಕರನ್ನು ಗೌರವಿಸಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ, ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕರಾದ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಚಿದಂಬರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಜಂಟಿ ಕೃಷಿ ನಿರ್ದೇಶಕಿ ಸುಷ್ಮಾ ಉಪಸ್ಥಿತರಿದ್ದರು.