ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ನೂತನ ಪೊಲೀಸ್ ಚೌಕಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಶುಕ್ರವಾರ ಉದ್ಘಾಟಿಸಿದರು. ಎಎಸ್ಪಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಶಶಿಧರ್ ಮತ್ತು ಇತರರು ಹಾಜರಿದ್ದರು.
- ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಮುತ್ತುರಾಜು ಹೇಳಿಕೆ
- ಪೊಲೀಸ್ ಚೌಕಿ ಉದ್ಘಾಟನೆ, ಸಂಚಾರ ನಿಯಮ ಉಲ್ಲಂಘನೆಗೆ ತಡೆಗೆ ಕಣ್ಗಾವಲು
ಚಾಮರಾಜನಗರ: ಜಿಲ್ಲೆ ಅಂತಾರಾಜ್ಯ ಗಡಿಯಾಗಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಮುಂದಿನ ವಾರದಿಂದ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಸ್ವಯಂಚಾಲಿತ ಕ್ಯಾಮರಾ ಕಣ್ಗಾವಲು ಶುರುವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಹೇಳಿದರು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಿರ್ಮಿಸಿರುವ ನೂತನ ಪೊಲೀಸ್ ಚೌಕಿಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ 14 ಕಡೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವು ಮುಂದಿನ ವಾರದಿಂದ ಸ್ವಯಂಚಾಲಿತ ಕಾರ್ಯವನ್ನು ಆರಂಭಿಸಲಿವೆ. ಅತಿಯಾದ ವೇಗ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ಇದ್ದರೆ, ಸೀಟ್ ಬೆಲ್ಟ್ ಹಾಕದೆ ಇದ್ದರೆ ಸ್ವಯಂಚಾಲಿತವಾಗಿ ಗುರುತಿಸಿ ವಾಹನಗಳ ನಂಬರ್ ಪ್ಲೇಟ್ ಪೋಟೋ ಸೆರೆಹಿಡಿಯುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೂ ಕೆಲವು ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಯಾಗುತ್ತಿದೆ. ಸಾರ್ವಜನಿಕರಲ್ಲಿ ಸಂಚಾರ ನಿಯಮಗಳು, ಕಾನೂನಿನ ಅರಿವು ಮೂಡಿಸಲು ಡಿಜಿಟಲ್ ಪರದೆಯನ್ನು ಅಳವಡಿಸಲಾಗುವುದು. ಪಟ್ಟಣದಲ್ಲಿ ಅಪಘಾತಗಳ ತಡೆಗಾಗಿ ಹಂಪ್ಸ್‌ಗಳನ್ನು ಹಾಕಿಸಿದ್ದೇವೆ. ಸಾರ್ವಜನಿಕರು ಪೊಲೀಸ್ ಇರಲಿ ಅಥವಾ ಇಲ್ಲದೆ ಹೋಗಲಿ ಸಂಚಾರ ನಿಯಮ ಪಾಲನೆ ಮಾಡಬೇಕು. ವಾಹನಗಳನ್ನು ಪಾರ್ಕಿಂಗ್ ಮಾಡುವಾಗ ರಸ್ತೆಯಲ್ಲಿ ನಿಲ್ಲಿಸಬಾರದು. ಲೈಸೆನ್ಸ್ ಇಲ್ಲದ ಮಕ್ಕಳಿಗೆ ಪಾಲಕರು ವಾಹನಗಳನ್ನು ಕೊಡಬಾರದು ಎಂದು ಹೇಳಿದರು.
ಚಾಮರಾಜನಗರ ಪಟ್ಟಣದಲ್ಲಿ ಇದ್ದ ಹಳೆಯ ಸಂಚಾರ ಪೊಲೀಸ್ ಚೌಕಿಗಳನ್ನು ನವೀಕರಣ ಮಾಡಿದ್ದೇವೆ. ಶ್ರೀಭುವನೇಶ್ವರಿ ವೃತ್ತ ಮತ್ತು ಸಂತೇಮರಹಳ್ಳಿ ವತ್ತದಲ್ಲಿರುವ ಹೊಸ ಚೌಕಿ ಕಾರ್ಯಾರಂಭವಾಗುತ್ತಿದೆ. ಇದೇ ರೀತಿ ದೊಡ್ಡರಾಯಪೇಟೆ ವೃತ್ತದಲ್ಲಿ ಚೌಕಿ ನಿರ್ಮಾಣ ಮಾಡಿದ್ದೇವೆ. ಮಳೆ ಬಂದ ಸಂದರ್ಭದಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಮಳೆಯಿಂದ ರಕ್ಷಣೆ ಪಡೆಯಲು ಮತ್ತು 24*7 ಕರ್ತವ್ಯ ನಿರ್ವಹಿಸಲು ನೆರವಾಗು ಚೌಕಿಗಳ ಕಾರ್ಯಾರಂಭವಾಗಿವೆ ಎಂದರು.
ಕೊಳ್ಳೇಗಾಲ ಪಟ್ಟಣದಲ್ಲೂ ಕೂಡ ಚೌಕಿಗಳನ್ನು ಸ್ಥಾಪನೆ ಮಾಡಿ ಉದ್ಘಾಟನೆ ಮಾಡಲಾಗಿದೆ. ಗುಂಡ್ಲುಪೇಟೆ ಪಟ್ಟಣದಲ್ಲೂ ಶೀಘ್ರದಲ್ಲೇ ಹೊಸ ಚೌಕಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ಮತ್ತು ಪೊಲೀಸರು ಇದ್ದರು.
ತಪ್ಪಲಿದೆ ಶ್ರದ್ಧಾಂಜಲಿ ಬ್ಯಾನರ್ ಹಾವಳಿ:
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿರುವ ಹಳೆಯ ಪೊಲೀಸ್ ಚೌಕಿಯನ್ನು ನವೀಕರಣ ಮಾಡಲಾಗಿದೆ. ಚೌಕಿಯ ಕೆಳ ಭಾಗದಲ್ಲಿ ಪೊಲೀಸ್ ಇಲಾಖೆಯ ಲಾಂಛನವನ್ನು ಅಂಟಿಸಲಾಗಿದೆ. ಇದಕ್ಕೂ ಮೊದಲು ಖಾಲಿ ಇದ್ದ ಈ ಸ್ಥಳದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬ್ಯಾನರ್‌ಗಳನ್ನು ಕಟ್ಟಲಾಗುತ್ತಿತ್ತು. ನಗರದ ಹೃದಯಭಾಗದ ಪ್ರಮುಖ ವೃತ್ತದಲ್ಲಿ ಶ್ರದ್ಧಾಂಜಲಿ ಭಾವಚಿತ್ರವೇ ಎದ್ದು ಕಾಣುತ್ತಿತ್ತು. ಈಗ ಈ ಸ್ಥಳದಲ್ಲಿ ಪೊಲೀಸ್ ಇಲಾಕೆ ಲಾಂಛನ ಹಾಕಿರುವುದರಿಂದ ಇದರ ಮೇಲೆ ಶ್ರದ್ಧಾಂಜಲಿ ಬ್ಯಾನರ್ ಕಟ್ಟುವುದು ತಪ್ಪಲಿದೆ.