ಹನೂರು ತಾಲೂಕಿನ ಲಕ್ಷ್ಮಯ್ಯನದೊಡ್ಡಿಯಲ್ಲಿ ಆಶ್ರಯ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳ ಮನೆಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಮಾಹಿತಿ ಪಡೆದರು. ಶಿವಕುಮಾರ್, ಕಾರ್ತಿಕ್, ನಭಿಖಾನ್, ರಾಚಪ್ಪ ಇತರಿರದ್ದರು.  ಹನೂರು
ಚಾಮರಾಜನಗರ

ಅರ್ಹರಿಗೆ ಆಶ್ರಯ ಯೋಜನೆ

ಶಾಸಕ ಎಂ.ಆರ್.ಮಂಜುನಾಥ್ ಆಶಯ

ಹನೂರು: ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಯ್ಯನದೊಡ್ಡಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳ ಮನೆಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.

ಗ್ರಾಮದಲ್ಲಿ ನಿವೇಶನ ರಹಿತ ಹಾಗೂ ಮನೆ ಇಲ್ಲದವರಿಗೆ ನಿವೇಶನ ನೀಡುವ ಉದ್ದೇಶದಿಂದ ಗ್ರಾಮದ ಸರ್ವೇ ನಂಬರ್ 937ರಲ್ಲಿ 4 ಎಕರೆ ಜಾಗವನ್ನು ಗುರುತಿಸಿ ಗ್ರಾಪಂ ವತಿಯಿಂದ ಸರ್ವೇ ಕಾರ್ಯ ನಡೆಸಿ 81 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಸ್ಥಳೀಯ ಮಾಜಿ ಜನಪ್ರನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಆಯ್ಕೆ ಮಾಡಿದ್ದ ಪಟ್ಟಿಯನ್ನು ಪರಿಶೀಲಿಸಿ ಅವರ ವಾಸಸ್ಥಳ ಹಾಗೂ ಪ್ರಸ್ತುತ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು.

ಬಳಿಕ ಶಾಸಕರು ಮಾತನಾಡಿ, ಗ್ರಾಮದಲ್ಲಿ ನಿವೇಶನ ಇಲ್ಲದೆ ಹಾಗೂ ಮನೆ ಇಲ್ಲದವರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಸೂರು ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ. ಹಾಗಾಗಿ ಆಶ್ರಯ ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಆದ್ದರಿಂದ ನಿಯಮಾನುಸಾರ ಪರಿಶೀಲನೆ ನಡೆಸಿ ಸೌಲಭ್ಯ ವಂಚಿತರಿಗೆ ಅನುಕೂಲ ಕಲ್ಪಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಆರ್‌ಐ ಶಿವಕುಮಾರ್, ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್, ಗ್ರಾಪಂ ಕಾರ್ಯದರ್ಶಿ ಬಸವರಾಜು, ಮುಖಂಡರಾದ ರಾಚಪ್ಪ, ಕೃಷ್ಣ, ಮಾದಪ್ಪ, ಗೋಪಾಲನಾಯ್ಕ, ಮಹದೇವ, ನಾಗರಾಜು, ಬಾಬು, ನಭಿಖಾನ್, ಮುದಾಸೀರ್ ಇತರರು ಇದ್ದರು.