ಬೈಲೂರು ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸುತ್ತಿದ್ದವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು. 
ಚಾಮರಾಜನಗರ

ಮರ ಕಡಿದು ಸಾಗಿಸುತ್ತಿದ್ದವನ ಬಂಧನ

ಪ್ರಮುಖ ಮುಖ್ಯಾಂಶಗಳು

  • ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ
  • ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯ ಭಕ್ತಿಭಾವಿ ಕೆರೆ ಅರಣ್ಯ ಪ್ರದೇಶ
  • ತೇಗದ ಮರವನ್ನು ಕಡಿದು ಸಾಗಿಸುತ್ತಿದ್ದ
ಹನೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯ ಭಕ್ತಿಭಾವಿ ಕೆರೆ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಜೆ ತೇಗದ ಮರವನ್ನು ಕಡಿದು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬನನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ತಾಲೂಕಿನ ಗುಂಡಿಮಾಳ ಗ್ರಾಮದ ಮಹದೇವಸ್ವಾಮಿ ಬಂಧಿತ ಆರೋಪಿ. ಇದೇ ಗ್ರಾಮದ ಮಹದೇವಪ್ಪ ಹಾಗೂ ಅಂಡೇಕುರುಬರ ದೊಡ್ಡಿ ಗ್ರಾಮದ ಜಡೇಸ್ವಾಮಿ ತಲೆಮರೆಸಿಕೊಂಡಿದ್ದಾರೆ.
ಈ ಮೂವರು ಬೈಲೂರು ಬಿ ಗಸ್ತಿನ ಭಕ್ತಿಭಾವಿ ಕೆರೆ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ 4 ತೇಗದ ಮರಗಳನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಸಾಗಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿಸಲಾಗಿ ಎಸಿಎಫ್ ಆರ್.ಎಸ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಪ್ರಮೋದ್ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದಾಗ ಮಹದೇವಸ್ವಾಮಿ ಸಿಕ್ಕಿ ಬಿದ್ದರೆ, ಇನ್ನಿಬ್ಬರು ಪರಾರಿಯಾಗಿದ್ದಾರೆ. 4 ತೇಗದ ದಿಮ್ಮಿಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರ ಪತ್ತೆಗೆ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಎಸ್. ಗಣೇಶ ಪ್ರಸಾದ, ಸಿಬ್ಬಂದಿ ಸಂದೇಶ ಯಳಕಾರ, ಶ್ರೀಪ್ರಕಾಶ್ ಗುಣಕಿ, ಸಂಪತ್‌ಕುಮಾರ್ ಇತರರು ಭಾಗಿಯಾಗಿದ್ದರು.