ಕೊಳ್ಳೇಗಾಲ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾಧಿಕಾರಿ ಶ್ರೀರೂಪಾ ಬುಧವಾರ ಭೇಟಿ ನೀಡಿ ಆಹಾರ ಪರಿಶೀಲಿಸಿದರು.
ಕೊಳ್ಳೇಗಾಲ: ಪಟ್ಟಣದಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಬುಧವಾರ ಜಿಲ್ಲಾಧಿಕಾರಿ ಶ್ರೀರೂಪಾ ಪರಿಶೀಲಿಸಿದರು.
ಶ್ರೀ ಮರಳೇಶ್ವರ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು. ಬಳಿಕ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ಎಆರ್‌ಟಿ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿ ಎಚ್‌ಐವಿ ಸೋಂಕಿತರಿಗೆ ಔಷಧ ಮತ್ತು ಸಮಾಲೋಚನೆ ದೊರೆಯುತ್ತಿದೆಯೇ ಎಂದು ಪರಿಶೀಲಿಸಿದರು. ಸ್ಥಳದಲ್ಲಿದ್ದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೇಶ್ವರಿ ಹಾಗೂ ಇತರೆ ಅಧಿಕಾರಿಗಳಿಂದ ಎಚ್‌ಐವಿ ಸೋಂಕಿತರಿಗೆ ಸಿಗುತ್ತಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರಲ್ಲದೆ ಎಚ್‌ಐವಿ ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದರು.
ಗುಣಮಟ್ಟದ ಆಹಾರ ನೀಡಲು ತಾಕೀತು
ಬ್ರದರನ್ ಚರ್ಚ್ ವೃತ್ತದಲ್ಲಿರುವ ಇಂದಿರಾ ಕ್ಯಾಟೀನ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀರೂಪಾ, ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ತಯಾರಾಗಿದ್ದ ಊಟ ಪರಿಶೀಲಿಸಿದರು. ಊಟಕ್ಕೆ ಬಂದಿದ್ದ ಸಾರ್ವಜನಿಕರು ಆತ್ಮೀಯವಾಗಿ ಮಾತನಾಡಿಸಿದರು. ಸ್ಥಳದಲ್ಲಿದ್ದ ಇಬ್ಬರು ಉತ್ತಂಬಳ್ಳಿ ಗ್ರಾಮದ ಮಕ್ಕಳನ್ನು ಶಾಲೆಗೆ ಏಕೆ ಹೋಗಿಲ್ಲ ಎಂದು ವಿಚಾರಿಸಿದರು. ಈ ವೇಳೆ ಪಾಲಕರು ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಬಂದಿದ್ದು ಊಟಕ್ಕೆ ಕ್ಯಾಂಟೀನ್‌ಗೆ ಬಂದಿರುವುದಾಗಿ ತಿಳಿಸಿದರು. ಶಾಲೆಗೆ ಗೈರಾಗದಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಕ್ಯಾಂಟೀನ್ ಸಿಬ್ಬಂದಿಗೆ ಶುಚಿತ್ವ ಜತೆಗೆ ಗುಣಮಟ್ಟದ ಆಹಾರ ನೀಡಬೇಕು ಎಂದು ತಾಕೀತು ಮಾಡಿದರು.
ಕೊಳ್ಳೇಗಾಲದ ಕಾವೇರಿ ನದಿ ತೀರದಲ್ಲಿ ಮರಳನ್ನು ಎತ್ತಿನ ಗಾಡಿಗಳ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ದೂರಿನ ಬಗ್ಗೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಸ್ಥಳದಲ್ಲಿದ್ದ ತಹಸೀಲ್ದಾರ್‌ಗೆ ಮಾಹಿತಿ ಕೇಳಿದರು. ತಹಸೀಲ್ದಾರ್ ಬಸವರಾಜು ಪ್ರತಿಕ್ರಿಯಿಸಿ, ಮುಳ್ಳೂರು ಗ್ರಾಮದ ಕಾವೇರಿ ನದಿ ತೀರದಲ್ಲಿ ಮರಳನ್ನು ಎತ್ತಿನ ಗಾಡಿಗಳಲ್ಲಿ ಸಾಗಿಸುವ ದೂರು ಕೇಳಿ ಬರುತ್ತಿದೆ ಎಂದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಅಕ್ರಮ ತಡೆಗಟ್ಟಲು ಸ್ಥಳಕ್ಕೆ ಭೇಟಿ ನೀಡಿ ಕ್ರಮವಹಿಸುವಂತೆ ಸೂಚಿಸಲಾಗುವುದು ಎಂದರು.
ತಿಮ್ಮರಾಜೀಪುರದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಮುರಾರ್ಜಿ ವಸತಿ ಶಾಲೆಗೆ ಡಿಸಿ ಶ್ರೀರೂಪಾ ಭೇಟಿ ನೀಡಿದರು. ಈ ವೇಳೆ ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಮಾಡಿದರು. ಜೀವನದಲ್ಲಿ ನಿಮ್ಮ ಕನಸುಗಳು ನನಸಾಗಬೇಕಾದರೆ ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.