ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾಗೆ ಅಖಿಲ ಕರ್ನಾಟಕ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಂಗಳವಾರ ಮನವಿ ಸಲ್ಲಿಸಿದರು. ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ಕೊಂಬು ಕಹಳೆ ರವಿಚಂದ್ರಪ್ರಸಾದ್ ಇದ್ದರು.
ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ದೊಡ್ಡರಸನ ಕೊಳಕ್ಕೆ ನೀರು ತುಂಬಿಸಬೇಕೆಂದು ಕೋರಿ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಮಹಾಸಭಾದ ಮುಖಂಡರು, ಬಿಸಿಲಿನ ತಾಣಮಾನ ಮತ್ತು ಮಳೆಯಾಗದೆ ಅಂತರ್ಜಲ ಕುಸಿತಗೊಂಡಿದೆ. ನಗರದಲ್ಲಿ ಹಲವು ಕೊಳಗಳು ಮುಚ್ಚಿ ಹೋಗಿರುವುದೂ ಇದಕ್ಕೆ ಕಾರಣವಾಗಿದೆ. ನಗರದಲ್ಲಿ ಈ ಹಿಂದೆ 7-8 ಕೊಳಗಳಿದ್ದವು. ಬಾವಿ ಮತ್ತು ಬೋರ್‌ವೆಲ್‌ಗಳಲ್ಲಿ ಸದಾಕಾಲ ನೀರು ಇರುತ್ತಿತ್ತು. ಇತ್ತೀಚೆಗೆ ನೀರೇ ಇಲ್ಲದಂತಾಗಿದೆ ಎಂದು ತಿಳಿಸಿದರು.
ನಗರದ ದೊಡ್ಡರಸಿನ ಕೊಳಕ್ಕೆ ಶಾಶ್ವತವಾಗಿ ನೀರು ತುಂಬಿಸುವ ವ್ಯವಸ್ಥೆಯನ್ನು ಮಾಡಿದರೆ ಪಟ್ಟಣದಲ್ಲಿ ಅಂತರ್ಜಲದ ಮಟ್ಟ ಹೆಚ್ಚಳವಾಗಲಿದೆ. ಈ ಹಿಂದೆ ದೊಡ್ಡ ಅರಸಿನಕೊಳದ ಪಕ್ಕದಲ್ಲಿ ದೊಡ್ಡಕೆರೆ ಇತ್ತು. ಮಳೆಯಾದ ಸಂದರ್ಭದಲ್ಲಿ ದೊಡ್ಡ ಕೆರೆಗೆ ನೀರು ತುಂಬಿಕೊಳ್ಳುತ್ತಿತ್ತು. ಬಳಿಕ ಅಲ್ಲಿಂದ ದೊಡ್ಡರಸಿನ ಕೊಳಕ್ಕೆ ನೀರು ಬರುತ್ತಿತ್ತು. ನಂತರ ಚಾಮರಾಜನಗರದ ಎದುರು ಇದ್ದ ಕಲ್ಯಾಣಿಗೂ ನೀರು ತುಂಬುತ್ತಿತ್ತು. ಆದರೆ ಈಗ ದೊಡ್ಡ ಕೆರೆ, ಚಾಮರಾಜೇಶ್ವರ ದೇವಸ್ಥಾನದ ಮುಂದೆ ಕೊಳ ಇಲ್ಲ. ಇರುವ ದೊಡ್ಡರಸಿನ ಕೊಳ್ಕಕಾದರೂ ಶಾಶ್ವತವಾಗಿ ನೀರು ತುಂಬುವ ಕಾರ್ಯವಾಗಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ಕೊಂಬು ಕಹಳೆ ರವಿಚಂದ್ರ ಪ್ರಸಾದ್ ಇದ್ದರು.
ಗಮನ ಸೆಳೆದಿದ್ದ ವರದಿ: ಇತಿಹಾಸದ ಮಹತ್ವ ಹೊಂದಿರುವ ನಗರದ ದೊಡ್ಡರಸನಕೊಳಕ್ಕೆ ನೀರು ತುಂಬಿಸಿಬೇಕೆಂದು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿದತ್ತು. ಈ ಕುರಿತು ಮಾ.23ರಂದು ‘ದೊಡ್ಡರಸನ ಕೊಳ ಅಭಿವೃದ್ಧಿ ಮರೀಚಿಕೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಕೊಳಕ್ಕೆ ನೀರು ತುಂಬಿಸೇಕೆಂದು ಡಿಸಿ ಶ್ರೀರೂಪಾಗೆ ಮನವಿ ಸಲ್ಲಿಸಿರುವ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.