ಸಫಾರಿ ಬಂದ್ ಮಾಡುವಂತೆ ಒತ್ತಾಯಿಸಿ ಹನೂರು ತಾಲೂಕಿನ ಪೊನ್ನಾಚಿಯಲ್ಲಿ ರೈತರು ಗ್ರಾಪಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪೊನ್ನಾಚಿ ರಾಜು, ಶಿವಮೂರ್ತಿ, ಲಿಂಗಪ್ಪ, ಚಂದ್ರಪ್ಪ ಇತರರಿದ್ದರು.
ಹನೂರು: ಜಿಲ್ಲೆಯಲ್ಲಿರುವ ಎಲ್ಲ ಸಫಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗುರುವಾರ ರೈತ ಸಂಘ ಹಾಗೂ ಹಸಿರು ಸೇನೆಯ ಅಸ್ತೂರು ಗ್ರಾಮ ಘಟಕದ ರೈತರು ಗ್ರಾಮ ಪಂಚಾಯಿತಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಖಂಡ ಪೊನ್ನಾಚಿ ರಾಜು ಮಾತನಾಡಿ, ನಾಗರಹೊಳೆ ಸೇರಿದಂತೆ ಜಿಲ್ಲೆಯ ಬಂಡೀಪುರ, ಬಿಆರ್‌ಟಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಸಫಾರಿಯಿಂದಾಗಿ ಕಾಡುಪ್ರಾಣಿಗಳು ಗ್ರಾಮಗಳತ್ತ ಆಗಮಿಸುತ್ತಿದ್ದ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ತುಂಬ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಮನಗಂಡು ಸಫಾರಿಯನ್ನು ಸ್ಥಗಿತಗೊಳಿಸುವುದರ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಪೊನ್ನಾಚಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಅಪರೇಟರ್ ಸುಧೀರ್ ಅವರು ಪಿಡಿಒ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವುದಾಗಿ ತಿಳಿಸಿದರು. ರೈತ ಮುಖಂಡರಾದ ಶಿವಮೂರ್ತಿ, ಲಿಂಗಪ್ಪ, ಚಂದ್ರಪ್ಪ, ಮಹದೇವಪ್ಪ ಹಾಗೂ ಇನ್ನಿತರರು ಇದ್ದರು.