ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಅಂಗನವಾಡಿ-ಬಿಸಿಯೂಟ ನೌಕರರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಎ.ನಾಗಮಣಿ, ಜಿ.ಭಾಗ್ಯ, ಮೀನಾಕ್ಷಿ, ಪಾರ್ವತಮ್ಮ, ಶಾಂತಮ್ಮ, ಸರೋಜಾ ಇತರರು ಪಾಲ್ಗೊಂಡಿದ್ದರು.
- ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮಹಿಳೆಯರು
- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಕೆ
ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಮತ್ತು ಬಿಸಿಯೂಟದ ನೌಕರರು ಶುಕ್ರವಾರ ಕರಾಳ ದಿನ ಆಚರಣೆ ಮಾಡಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಚುನಾವಣೆ ಭರವಸೆಯಂತೆ ಅಂಗನವಾಡಿ ನೌಕರರಿಗೆ 15 ಸಾವಿರ ರೂ., ಮತ್ತು ಸಹಾಯಕಿಯರಿಗೆ 10 ಸಾವಿರ ರೂ.ಜಾರಿ ಮಾಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್‌ಕೆಜಿ-ಯುಕೆಜಿ ವಿಸ್ತರಣೆ ಮಾಡಬೇಕು. 2026ರ ಮಾ.24ರ ಸಭೆಯಂತೆ 10 ಸಾವಿರ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಅನುದಾನ ನೀಡಬೇಕು. 3-6 ವರ್ಷದ ಮಕ್ಕಳಿಗೆ ಆರಂಭಿಕ ಬಾಲ್ಯ ಆರೈಕೆ, ಶಿಕ್ಷಣ ಮತ್ತು ಅಭಿವೃದ್ಧಿಹಕ್ಕನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು. 2011ರಿಂದ ನಿವೃತ್ತಿ ಆದವರಿಗೆ ಗ್ರಾಚ್ಯುಟಿ ಪಾವತಿಸಬೇಕು ಎಂದು ಒತ್ತಾಯಿಸಿದರು.
3-6 ವರ್ಷದ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಮತ್ತು ಆಟಿಕೆಗಳನ್ನು ಒದಗಿಸಬೇಕು. 5. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿಯೂ ಪರಿವರ್ತಿಸಬೇಕು. ಅಂಗನವಾಡಿ ನೌಕರರನ್ನು ಬಿಎಲ್‌ಓ ಕೆಲಸದಿಂದ ಸಂಪೂರ್ಣ ಕೈಬಿಡಬೇಕು. ಪೋಷಣ್ ಟ್ರ್ಯಾಕರ್ ಹೆಸರಿನಲ್ಲಿ ಕಿರುಕುಳ ನಿಲ್ಲಿಸಬೇಕು. ಮೊಬೈಲ್, ಡೇಟಾ ಹಾಗೂ ನಿರ್ವಹಣಾ ವೆಚ್ಚಗಳನ್ನು ಮರುಪಾವತಿಸಬೇಕು. ಡಿಜಿಟಲೀಕರಣವನ್ನು ಮೇಲ್ವಿಚಾರಣೆ ಅಥವಾ ಕಿರುಕುಳದ ಸಾಧನವಾಗಿ ಬಳಸಬಾರದು. ಡಿಜಿಟಲ್ ಕೆಲಸಕ್ಕಾಗಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‌ಗಳು ಮತ್ತು ಡೇಟಾ ಪ್ಯಾಕ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಮೂಲಸೌಕರ್ಯ, ಗ್ಯಾಸ್ ಸಂಪರ್ಕ, ಅಡುಗೆ ಸಲಕರಣೆಗಳು ಹಾಗೂ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರಗಳ ಬಾಡಿಗೆಯನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹೆಚ್ಚಿಸಬೇಕು ಎಂದರು.
ಬಿಸಿಯೂಟ ನೌಕರ ಮನವಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಆಶ್ವಾಸನೆಯಂತೆ ಬಿಸಿಯೂಟ ಕಾರ್ಮಿಕರಿಗೆ 7000 ವೇತನ ಹೆಚ್ಚಳ ಆಗಬೇಕು. ಈಗಾಗಲೇ ಕೆಲಸ ಮಾಡುತ್ತಿರುವ 6 ಗಂಟೆ ಕೆಲಸದ ಅವಧಿಯ ಸುತ್ತೋಲೆ ಹೊರಡಿಸಬೇಕು. ಆರೋಗ್ಯ ವಿಮೆ ಜಾರಿ ಮಾಡಬೇಕು. ಮಾಸಿಕ ಪಿಂಚಣಿ 10 ಸಾವಿರ ಕೊಡಬೇಕು ಎಂದು ಬಿಸಿಯೂಟದ ನೌಕರರು ಮನವಿ ಮಾಡಿದರು.
ಎಲ್ಲ ಜಿಲ್ಲೆಗಳಲ್ಲಿ ನಿವೃತಿ ಹೊಂದಿದ ನೌಕರರಿಗೆ ಇಡಿಗಂಟು ತಕ್ಷಣ ಜಾರಿ ಮಾಡಬೇಕು. ಅಡುಗೆ ಕೇಂದ್ರಗಳು ಸುಸಜ್ಜಿತವಾಗಿ ಇಲ್ಲದ ಕಡೆ ಉತ್ತಮ ಅಡುಗೆ ಕೇಂದ್ರಗಳನ್ನು ನಿರ್ಮಿಸಬೇಕು. ಹಾಗೂ ಕ್ರಿಮಿ ಕೀಟಗಳು ಬರದ ರೀತಿಯಲ್ಲಿ ಅಡುಗೆ ಕೇಂದ್ರಗಳ ಸುತ್ತ ಮುತ್ತ ಸೂಕ್ತ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.
ಉತ್ತರಪದೇಶ ಮತ್ತು ಪಂಜಾಬ್ ರಾಜ್ಯದ ಮಾನ್ನ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ ಆಗಬೇಕು. ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು. ಬೇಸಿಗೆ ಮತ್ತು ದಸರಾ ರಜೆಗಳ ಮತ್ತು ಚುನಾವಣಾ ಸಂದರ್ಭದಲ್ಲಿ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು ಎಂದು ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ರವಾನಿಸಲು ಕೋರಿದರು.
ಪ್ರತಿಭಟನೆಯಲ್ಲಿ ಎ.ನಾಗಮಣಿ, ಜಿ.ಭಾಗ್ಯ, ಎಸ್.ಪಾರ್ವತಮ್ಮ, ಗುರುಮಲ್ಲಮ್ಮ, ಮೀನಾಕ್ಷಿ, ಪಾರ್ವತಮ್ಮ, ಶಾಂತಮ್ಮ, ಭವಾನಿ, ಸರೋಜಾ, ಗೌರಮ್ಮ, ಭಾಗ್ಯ, ರಾಣಿ, ಹೇಮಾವತಿ, ಸುಮಿತ್ರಾ, ತುಳಸಮ್ಮ, ಮೀನಾಕ್ಷಿ, ಶಾಂತಮ್ಮ,ದೇವಮ್ಮ, ಮಂಜುಳಾ, ಸೀತಾ, ಮಮತಾ, ಶೋಭಾ, ಸುಂದ್ರಮ್ಮ, ನಾಗಮ್ಮ, ನಾಗರತ್ನ ಇತರರು ಇದ್ದರು.