ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರ 
ಚಾಮರಾಜನಗರ

ರಂಗಮಂದಿರ ಕೊರತೆಗಳ ಸಾಗರ

ಪ್ರಮುಖ ಮುಖ್ಯಾಂಶಗಳು

  • ಮೇರು ನಟ ಡಾ.ರಾಜ್‌ಕುಮಾರ್ ಹೆಸರಿನ ಕಲಾವೇದಿಕೆ
  • ಸೌಕರ್ಯಗಳಿಲ್ಲದೆ ಮಂಕಾದ ಮಹಲು
ಚಾಮರಾಜನಗರ: ಕಲೆಗಳ ತವರೂರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಲಾವೇದಿಕೆ ಕೊರತೆಗಳಿಂದ ಕೂಡಿದೆ. ರಂಗಮಂದಿರಕ್ಕೆ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರ ಹೆಸರನ್ನಿಟ್ಟಿರುವ ಕಾರಣಕ್ಕಾದರೂ ಸೌಕರ್ಯಗಳನ್ನು ಒದಗಿಸಿಕೊಡದೆ ಗೌರವ ಕಳೆಯಲಾಗುತ್ತಿದೆ.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ರಾಜ್‌ಕುಮಾರ್ ರಂಗಮಂದಿರ ಹೊರಗಿನಿಂದ ನೋಡಲು ತುಂಬಾ ಸುಂದರವಾಗಿದೆ. ಆದರೆ ಒಳಗಿನ ಕೊರತೆಗಳು ಕಲಾವೇದಿಕೆಯನ್ನು ಕುರೂಪಗೊಳಿಸಿದೆ. ವೇದಿಕೆ ಮೇಲಿನ ನೆಲಹಾಸು ಕಿತ್ತು ಬಂದಿದೆ. ಅಕ್ಕಪಕ್ಕದ ಕೊಠಡಿಗಳಲ್ಲಿ ಕಲಾವಿದರು ಬೇಕಾದ ವ್ಯವಸ್ಥೆಗಳಿಲ್ಲ. ಶೌಚಗೃಹಗಳು ಗಬ್ಬುನಾರುತ್ತಿವೆ. ಧ್ವನಿ-ಬೆಳಕಿನ ವ್ಯವಸ್ಥೆ ಇಲ್ಲ. ವಿದ್ಯುತ್ ಕೈ ಕೊಟ್ಟರೆ ಜನರೇಟರ್ ಅನ್ನು ಹೊರಗಿನಿಂದ ತರಿಸಬೇಕು. ಬಾಲ್ಕನಿಯಲ್ಲಿ ಕುರ್ಚಿಗಳಿಲ್ಲ, ನೆಲದ ಮೇಲೆ ಕೂರಬೇಕು ಅಥವಾ ಹೊರಗಿನಿಂದ ಕುರ್ಚಿಗಳನ್ನು ಬಾಡಿಗೆಗೆ ತಂದು ಹಾಕಬೇಕು. ರಂಗಮಂದಿರವನ್ನು ನಿರ್ವಹಣೆ ಮಾಡಲು ಸಿಬ್ಬಂದಿ ಇಲ್ಲ. ತಾಲೀಮು ಮಾಡಲು ಕೊಠಡಿಗಳಿಲ್ಲ. ಹೊರಗಿರುವ ಶೌಚಗೃಹ ಸ್ವಚ್ಛವಾಗಿಲ್ಲ, ಕಲಾಮಂದಿರದ ಆವರಣ ಕಳೆಗುಂದಿದೆ. ಒಟ್ಟಾರೆಯಾಗಿ ಡಾ.ರಾಜ್‌ಕುಮಾರ್ ರಂಗಮಂದಿರ ಇಲ್ಲಗಳ ನಡುವೆ ಇದೆ ಎನ್ನುವುದಷ್ಟೇ ಸತ್ಯ.