ಪಚ್ಚೆದೊಡ್ಡಿ ಗ್ರಾಮಕ್ಕೆ ರಸ್ತೆ ಹಾಗೂ ವಾಹನ ಸೌಕರ್ಯ ಒದಗಿಸುವಂತೆ ವಿದ್ಯಾರ್ಥಿಗಳು ವಿಡಿಯೋ ಮೂಲಕ ಸಿಎಂ ಸಿದ್ದರಾಮಯ್ಯ ಅವರಲ್ಲಿ ಒತ್ತಾಯಿಸಿದರು.
ಶಾಲೆಗೆ ಹೋಗುವ ರಸ್ತೆ ಸರಿಪಡಿಸಲು ವಿದ್ಯಾರ್ಥಿಗಳ ಆಗ್ರಹ
ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಗೆ ರಸ್ತೆ ಹಾಗೂ ವಾಹನ ಸೌಕರ್ಯ ಕಲ್ಪಿಸಿ ಕೊಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ವಿದ್ಯಾರ್ಥಿಗಳು ಟೀಕಿಸುವುದರ ಮೂಲಕ ಮನವಿ ಮಾಡಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.
ಅರಣ್ಯ ಪ್ರದೇಶದೊಳಗಿರುವ ಈ ಗ್ರಾಮದಿಂದ ನಿತ್ಯ ಹಲವು ವಿದ್ಯಾರ್ಥಿಗಳು ಕಾಂಚಳ್ಳಿ, ಅಜ್ಜೀಪುರ, ರಾಮಾಪುರ ಗ್ರಾಮದ ಶಾಲಾ, ಕಾಲೇಜಿಗೆ ತೆರಳುತ್ತಾರೆ. ಆದರೆ ಕಾಂಚಳ್ಳಿ ಗ್ರಾಮದಿಂದ ಸಂಪರ್ಕ ಕಲ್ಪಿಸುವ ಮಣ್ಣಿನಿಂದ ಕೂಡಿರುವ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಇತ್ತ ಶಾಲೆಗಳಿಗೆ ತೆರಳಲು ವಾಹನ ವ್ಯವಸ್ಥೆಯೇ ಇಲ್ಲ. ಇದರಿಂದ ಈ ದಾರಿಯಲ್ಲೇ ವಿದ್ಯಾರ್ಥಿಗಳು ಕಿ.ಮೀ.ಗಟ್ಟಲೇ ನಡೆದು ಸಾಗಬೇಕಿರುವುದು ಒಂದೆಡೆಯಾದರೆ, ಈ ಮಾರ್ಗದಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಈ ಬಗ್ಗೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇದರಿಂದ ಬೇಸತ್ತ ವಿದ್ಯಾರ್ಥಿಗಳು ಶನಿವಾರ ಶಾಲಾ, ಕಾಲೇಜಿಗೆ ತೆರಳುವಾಗ ಮಾರ್ಗಮಧ್ಯೆ ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆಯನ್ನು ಕೂಗುವುದರ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ಜತೆಗೆ ಕೆಲ ಹೆಣ್ಣು ಮಕ್ಕಳು ಇಲ್ಲಿನ ವಾಸ್ತವ ಸ್ಥಿತಿ ಹಾಗೂ ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನಾವು ಚೆನ್ನಾಗಿ ಓದಬೇಕು. ಆದ್ದರಿಂದ ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ನಿರ್ಮಿಸಿ ಕೊಡುವುದರ ಜತೆಗೆ ಶಾಲೆಗೆ ತೆರಳಲು ವಾಹನ ಸೌಕರ್ಯ ಒದಗಿಸಬೇಕು ಎಂದು ವಿಡಿಯೋ ಮೂಲಕ ಒತ್ತಾಯಿಸಿದ್ದಾರೆ.