ಚಾಮರಾಜನಗರದ ಶಂಕರಪುರದ ಜೈಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜಸೇವಕ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಪ್ರದೀಪ್‌ಕುಮಾರ್ ದೀಕ್ಷಿತ್, ಉಮ್ಮತ್ತೂರು ಇಂದುಶೇಖರ್, ಸುರೇಶ್‌ನಾಗ್ ಹರದನಹಳ್ಳಿ ಇತರರು ಇದ್ದರು.
- ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಆಯೋಜನೆ
- ರಂಗಸ್ವಾಮಿ ಅವರಿಗೆ ಸನ್ಮಾನ
ಚಾಮರಾಜನಗರ: ದೇಶಾಭಿಮಾನ, ಭಾಷಾಭಿಮಾನ ಹೊಂದಿದ ಸಮಾಜ ಸೇವಕರಿಗೆ ಸಮಾಜದಲ್ಲಿ ಸದಾ ಗೌರವವಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಶಂಕರಪುರದ ಜೈಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಸ್ವಾಮಿ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಹೊಸ ಆನಂದೂರು ಗ್ರಾಮದ ರಂಗಸ್ವಾಮಿ ಬಾಲ್ಯದಿಂದಲೂ ದೇಶಾಭಿಮಾನ, ಭಾಷಾಭಿಮಾನವನ್ನು ಹೊಂದಿಕೊಂಡು ಸೈಕಲ್ನಲ್ಲಿ ಕನ್ನಡದ ಬರಹಗಳನ್ನು ಬರೆದು ಕನ್ನಡದ ಜಾಗೃತಿಯನ್ನು ಮಾಡುವ ಜತೆಗೆ 3000ಕ್ಕೂ ಹೆಚ್ಚು ಶಾಲೆಗಳಿಗೆ ಕಪ್ಪು ಹಲಗೆಗೆ ಬಣ್ಣವನ್ನು ಹಾಗೂ ಕಟ್ಟಡಗಳಿಗೆ ಬಣ್ಣವನ್ನು ಹಚ್ಚುವ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಸ್ವಾಮಿ ವೃತ್ತಿಯಲ್ಲಿ ಬಣ್ಣ ಹಚ್ಚುವ ಕಾರ್ಯದ ಜತೆಗೆ ಸಮಾಜ ಸೇವೆ, ಶಾಲೆಗಳಲ್ಲಿ ಮಿಮಿಕ್ರಿ ಹಾಗೂ ಗಾಯನವನ್ನು ನಡೆಸಿಕೊಡುವ ಮೂಲಕ ತಮ್ಮದೇ ಆದ ಕನ್ನಡದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರಿಗೆ ಭಗವಂತ ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ಆಶಿಸಿ ಗೌರವ ಪೂರಕವಾಗಿ ಸನ್ಮಾನಿಸಲಾಗಿದೆ ಎಂದರು.
ಸಂಸ್ಕೃತಿ ಚಿಂತಕ ಪ್ರದೀಪ್‌ಕುಮಾರ್ ದೀಕ್ಷಿತ್ ಮಾತನಾಡಿ, ನನಗೆ ಏನೂ ಇಲ್ಲದಿದ್ದರೂ ಸಮಾಜಕ್ಕೆ ಏನಾದರೂ ಸಲ್ಲಿಸಬೇಕೆಂಬ ಮಹತ್ವದ ಆತ್ಮವಿಶ್ವಾಸವೇ ರಂಗಸ್ವಾಮಿಗೆ ವಿಶೇಷ ಗೌರವ ಸಲ್ಲಿಸಲು ಅವಕಾಶವಾಗಿದೆ. ಅವರ ಪ್ರಾಮಾಣಿಕತೆ ಸೇವಾ ಗುಣ ಮತ್ತು ಆದರ್ಶಗಳು ಮತ್ತಷ್ಟು ಹೆಚ್ಚಾಗಲಿ ಎಂದು ತಿಳಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ರಂಗಸ್ವಾಮಿ, ತಂದೆ-ತಾಯಿ ಗುರು ಹಿರಿಯರನ್ನು ಗೌರವಿಸಬೇಕು. ಅಂತರಂಗ ಶುದ್ಧವಾಗಿರಬೇಕು. ಪ್ರತಿ ಹೆಣ್ಣನ್ನು ಗೌರವದಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ನನ್ನಿಂದ ಕಿಂಚಿತ್ತು ಸೇವೆ ಸಲ್ಲಿಸುವ ಮನಸ್ಸು ಬೆಳಸಿಕೊಂಡಾಗ ನಾವು ಪುಣ್ಯವಂತರಾಗುತ್ತೇವೆ. ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಬಹಳ ಸಂತೋಷವನ್ನು ತಂದಿದೆ. ಸಮಾಜದ ಸೇವೆಯನ್ನು ಸಲ್ಲಿಸಲು ಮತ್ತಷ್ಟು ಸ್ಫೂರ್ತಿ ಬಂದಿದೆ ಎಂದರು. ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಜನಪದ ಗಾಯಕರಾದ ಸುರೇಶ್‌ನಾಗ್ ಹರದನಹಳ್ಳಿ ಉಪಸ್ಥಿತರಿದ್ದರು.