ಚಾಮರಾಜನಗರ ತಾಲೂಕಿನ ಕನ್ನೇರಿ ಕಾಲನಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮಸಭೆಯನ್ನು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ. ಸಿ.ಮಾದೇಗೌಡ ಉದ್ಘಾಟಿಸಿದರು. ಕೆ.ಗುಡಿ ವನ್ಯಜೀವಿ ಉಪ ವಲಯ ಅರಣ್ಯಾಧಿಕಾರಿ ದಿನೇಶ್, ಕಂದಾಯ ನಿರೀಕ್ಷಕ ಅಧಿಕಾರಿ ಜಯಪ್ಪ, ಸಂಘದ ಸದಸ್ಯರಾದ ಕೋಣುರೇಗೌಡ, ಶಿವಣ್ಣ, ಸಿದ್ದೇಗೌಡ ಇತರರು ಉಪಸ್ಥಿತರಿದ್ದರು.
- ಗ್ರಾಮಸಭೆಯಲ್ಲಿ ಡಾ.ಸಿ.ಮಾದೇಗೌಡ ಒತ್ತಾಯ
- ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯಕ್ಕಾಗಿ ಆಗ್ರಹ
ಚಾಮರಾಜನಗರ; ತಾಲೂಕಿನ ಕನ್ನೇರಿ ಕಾಲನಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ವಸತಿ ರಹಿತರಿಗೆ ನಿವೇಶನ ನೀಡಬೇಕೆಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ. ಸಿ.ಮಾದೇಗೌಡ ಒತ್ತಾಯಿಸಿದರು.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ತಾಲೂಕಿನ ಕನ್ನೇರಿ ಕಾಲನಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಸಭೆಯಲ್ಲಿ ನಿವೇಶನಕ್ಕಾಗಿ 115 ಕುಟುಂಬಗಳು ವಿವಾದಿತ ಜಮೀನು 3(1)(ಎಂ) ಅನುಚ್ಛೇದಲ್ಲಿ ಅರ್ಜಿ ಸಲ್ಲಿಸಿವೆ. 166 ಕುಟುಂಬಗಳು ನಿವೇಶನಕ್ಕೆ ಹಾಗೂ ಮೂಲ ಸೌಲಭ್ಯಗಳಾದ ಸಮುದಾಯ ಭವನ, ಶಾಲೆ, ಆಸ್ಪತ್ರೆ, ವೃತ್ತಿ ತರಬೇತಿ ಕೇಂದ್ರ, ಸಮುದಾಯ ಹಕ್ಕುಗಳಾದ ಸ್ಮಶಾನ, ಸಾಂಸ್ಕೃತಿಕ ಹಕ್ಕು,, ಸಾಗಾಣಿಕೆ ಪರವಾನ, ಕಂದಾಯ ಗ್ರಾಮಗಳನ್ನಾಗಿ ಮಾಡಲು ಗ್ರಾಮಸಭೆಯಲ್ಲಿ ಅನುಮೋದಿಸಿ ಉಪ ವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ ಎರಡು ದಶಕವಾದರೂ ಸಹ ಆದಿವಾಸಿಗಳಿಗೆ ಹಕ್ಕು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದಿವಾಸಿಗಳಿಗೆ ಹಕ್ಕುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ವೈಯಕ್ತಿಕ ಭೂಮಿ ಹಕ್ಕು ಪತ್ರ, ಸಮುದಾಯದ ಹಕ್ಕು ಪತ್ರ. ಸಾಕು ಪ್ರಾಣಿಗಳನ್ನು ಮೇಯಿಸುವ, ಸಾಂಸ್ಕೃತಿಕ, ಮೀನಗಾರಿಕೆ ಹಕ್ಕು ಮತ್ತು ಅರಣ್ಯ ಸಂರಕ್ಷಣೆ ಮಾಡುವ ಹಕ್ಕು ದೊರೆತ್ತಿದೆ. ಅದರೆ ಕಾನೂನು ಜಾರಿಯಾಗಿ 20 ವರ್ಷಗಳು ಕಳೆದರೂ ಇನ್ನು ಕೆಲವು ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿವಿಧ ಹಕ್ಕುಗಳಿಗೆ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ, ಹಕ್ಕುಗಳನ್ನು ಪಡೆದ ಮೇಲೆ ಅರಣ್ಯ ಸಂಪನ್ಮೂಲ ಸಂರಕ್ಷಣೆ ಮತ್ತು ನಿರ್ವಹಣಾ ಸಮಿತಿಯನ್ನು ಮಾಡಿ ಯೋಜನೆಯನ್ನು ಮಾಡಬೇಕಾಗುತ್ತದೆ. ಯೋಜನೆಯಲ್ಲಿ ಕಾಡಿನ ಸಂರಕ್ಷಣೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆ.ಗುಡಿ ವನ್ಯಜೀವಿ ಉಪ ವಲಯ ಅರಣ್ಯಾಧಿಕಾರಿ ದಿನೇಶ್ ಮಾತನಾಡಿ, ಹಕ್ಕುಪತ್ರ ಇಲ್ಲದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಅವಕಾಶವನ್ನು ನೀಡಲಾಗಿದೆ. ಗಿರಿಜನರಿಗೆ ಕೆಲವು ಹಕ್ಕುಗಳು ಹಾಗೂ ಇತರೆ ಸೌಲಭ್ಯಗಳು ಸಿಕ್ಕಿಲ್ಲ. ಇದನ್ನು ಕೊಡಿಸಿಕೊಡಲು ಪ್ರಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಅಧಿಕಾರಿ ಜಯಪ್ಪ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಅಗತ್ಯ ಸೌಲಭ್ಯ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಗಿರಿಜನರು ಸಲ್ಲಿಸಿರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸಭೆಯಲ್ಲಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಸದಸ್ಯರಾದ ಕೋಣುರೇಗೌಡ, ಶಿವಣ್ಣ, ಸಿದ್ದೇಗೌಡ, ಪುಣಜನೂರು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಲಕ್ಷ್ಮಣನಾಯ್ಕ, ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಕಮಲಾಕರ್, ಸದಸ್ಯರಾದ ರಂಗೇಗೌಡ, ಪುಷ್ಪಾ, ಬಸವಣ್ಣ, ಹಲಗಮ್ಮ, ಮಹದೇವಮ್ಮ, ಗ್ರಾಮದ ಯಜಮಾನರು, ಮಹಿಳೆಯರು ಇದ್ದರು.