ಅಲಗುಮೂಲೆ ಗ್ರಾಮದಲ್ಲಿ ಕೆಂಡಗಣ್ಣಸ್ವಾಮಿ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ಜರುಗಿತು.
ಹುಣ್ಣಿಮೆ ಹಿನ್ನೆಲೆ ಸಹಸ್ರಾರು ಭಕ್ತರು ಭಾಗಿ
ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಅಲಗುಮೂಲೆ ಕೆಂಡಗಣ್ಣಸ್ವಾಮಿ ದೇಗುಲದಲ್ಲಿ ಬುಧವಾರ ರಾತ್ರಿ ಹುಣ್ಣಿಮೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು.
ಹೊಸ್ತಿಲ ಹುಣ್ಣಿಮೆಯ ಅಂಗವಾಗಿ ಪ್ರತಿ ವರ್ಷ ಕೆಂಡಗಣ್ಣಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಗ್ರಾಮದಲ್ಲಿ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ವಿಜೃಂಭಣೆಯಿಂದ ಉತ್ಸವವನ್ನು ನೆರವೇರಿಸುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಇಡೀ ಗ್ರಾಮದ ಬಡಾವಣೆಗಳು ಸಹ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಚಿತ್ತಾಕರ್ಷಕ ರಂಗೋಲಿ ಎಲ್ಲರ ಗಮನ ಸೆಳೆಯುವಂತಿತ್ತು.
ಸಂಜೆ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಅರ್ಚಕರು, ಗ್ರಾಮಸ್ಥರು ಹಾಗೂ ಭಕ್ತರು ಸತ್ತಿಗೆ, ಸೂರಿಪಾನಿ, ನಂದಿಕಂಬ, ಮಂಗಳವಾದ್ಯ ಹಾಗೂ ಪಂಚ ಕಳಸ ಸಮೇತ ಗ್ರಾಮದ ಹೊರವಲಯದಲ್ಲಿನ ಮುಂಬೆಟ್ಟದಲ್ಲಿ ನೆಲೆಸಿರುವ ಕೆಂಡಗಣ್ಣಸ್ವಾಮಿ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ನೆರೆದಿದ್ದ ಭಕ್ತರಿಗೆ ಮಹಾ ಪ್ರಸಾದವನ್ನು ವಿನಿಯೋಗಿಸಲಾಯಿತು. ಬಳಿಕ ಪೂಜೆ ಸಲ್ಲಿಸಿದ್ದ ತೀರ್ಥವನ್ನು ಮೆರವಣಿಗೆಯ ಮೂಲಕ ಗ್ರಾಮದ ಕೆಂಡಗಣ್ಣಸ್ವಾಮಿಗೆ ದೇಗುಲಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಜೃಂಭಣೆಯ ಪಲ್ಲಕ್ಕಿ ಉತ್ತವ: ರಾತ್ರಿ 11ರ ವೇಳೆಯಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೂರಿಸಿ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮದ ಬನ್ನಿಮಂಟಪದಿಂದ ಹೊರಟ ಮೆರವಣಿಯು ಸುಮಾರು 2 ತಾಸು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಬಸವ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಹೆಣ್ಣು ಮಕ್ಕಳು ಉತ್ಸವ ಮೂರ್ತಿಗೆ ಆರತಿ ಬೆಳಗುವುದರ ಮೂಲಕ ಭಕ್ತಿ ಭಾವ ಮೆರೆದರು. ಮಹಿಳೆಯರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತರು, ಯುವಕರು ಜಯ-ಘೋಷಗಳನ್ನು ಮೊಳಗಿಸಿಸುವುದರ ಜತೆಗೆ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಮೂಲಕ ಗ್ರಾಮದಲ್ಲಿ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆಯು ವಿಜೃಂಭಣೆಯಿಂದ ಜರುಗಿತು. ರಾತ್ರಿ ದೇಗುಲದ ಮುಂಭಾಗದಲ್ಲಿ ಹರಿಕಥೆಯನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಆಲಿಸಿ ಸ್ವಾಮಿಯ ಗುಣಗಾನ ಮಾಡಿದರು.