ಬಸವರಾಜು ಅವರು ಜಮೀನಿನಲ್ಲಿ ಬೆಳೆದಿರುವ ಸೂರ್ಯಕಾಂತಿ ಫಸಲು ಸಮೃದ್ಧಿಯಿಂದ ಕೂಡಿರುವುದು. 
ಚಾಮರಾಜನಗರ

ನೆಮ್ಮದಿ ಬದುಕು ಕಟ್ಟಿಕೊಟ್ಟ ಕೃಷಿ

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಆದಾಯ ತಂದ ವಿವಿಧ ಬೆಳೆಗಳು
  • ವ್ಯಾಪಾರದಲ್ಲಿ ನಷ್ಟ, ಬೇಸಾಯದಲ್ಲಿ ಯಶಸ್ಸು
ಹನೂರು: ಪಟ್ಟಣದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ರೈತರೊಬ್ಬರನ್ನು ಕೃಷಿ ಹಾಗೂ ಹೈನುಗಾರಿಕೆ ಕೈ ಹಿಡಿದಿದ್ದು, ಉತ್ತಮ ಆದಾಯವನ್ನು ತಂದು ಕೊಡುವುದರ ಮೂಲಕ ನೆಮ್ಮದಿಯ ಜೀವನವನ್ನು ರೂಪಿಸಿಕೊಟ್ಟಿದೆ.
ಇದಕ್ಕೆ ಹನೂರಿನ ದಿವಂಗತ ಮಹಾಂತದೇವರು ಅವರ ಪುತ್ರ ಬಸವರಾಜು ಅವರೇ ಸಾಕ್ಷಿ. ಬಾಲ್ಯದಿಂದ ಬಡತನ ಇದ್ದ ಕಾರಣ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಈ ಹಿಂದೆ ಅವರ ತಂದೆ ಪಟ್ಟಣದ ಹೊರವಲಯದಲ್ಲಿ ಹೊಂದಿದ್ದ 3 ಎಕರೆ ಖುಷ್ಕಿ ಜಮೀನಿನಲ್ಲಿ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದರು. ನೀರಾವರಿಯ ಸಮಸ್ಯೆ ಇದ್ದ ಕಾರಣ ವರ್ಷಕ್ಕೆ ಒಂದು ಬೆಳೆ ಮಾತ್ರ ಬೆಳೆಯಲು ಸಾಧ್ಯವಾಗುತ್ತಿತ್ತು. ಹಾಗಾಗಿ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ. ಕೆಲ ವರ್ಷದ ನಂತರ ತಂದೆ ನಿಧನರಾದ್ದರಿಂದ ಜಮೀನು ಪಾಳು ಬೀಳುವಂತಾಯಿತು. ಕೃಷಿಯ ಬಗ್ಗೆ ನಿರಾಸಕ್ತಿ ಹೊಂದಿದ ಬಸವರಾಜು ಅವರು ಕುಟುಂಬ ನಿರ್ವಹಣೆಗಾಗಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರದಲ್ಲಿ ತೊಡಗಿದರು. ಹಲವು ವರ್ಷಗಳ ಕಾಲ ಈ ಕೆಲಸದಲ್ಲಿ ಮುಂದುವರಿದರೂ ಸಫಲತೆ ಕಾಣದೆ ನಷ್ಟ ಅನುಭವಿಸಬೇಕಾಯಿತು. ಇದರಿಂದ ಬೇಸತ್ತಾ ಇವರು ಕೃಷಿಯತ್ತ ಮುಖ ಮಾಡಬೇಕಾಯಿತು. ದೃಢ ನಿರ್ಧಾರವನ್ನು ಹೊಂದಿದ ಅವರು ಪಾಳು ಬಿದ್ದಿದ್ದ ಭೂಮಿಯನ್ನು ಉಳುಮೆ ಮಾಡಿಸಿದರು. ರೈತರ ಮಾರ್ಗದರ್ಶನ ಪಡೆದು ಆರಂಭದಲ್ಲೇ ಮುಸುಕಿನ ಜೋಳವನ್ನು ಬೆಳೆದು ಯಶಸ್ಸು ಕಂಡರು. ಉತ್ತಮ ಆದಾಯವನ್ನು ಹೊಂದುವಂತಾದರು. ಇದರಿಂದ ಜೀವನ ಮಟ್ಟ ತಕ್ಕ ಮಟ್ಟಿಗೆ ಸುಧಾರಣೆ ಕಂಡಿತು. ಇದು ಕೃಷಿಯ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸಲು ಕಾರಣವಾಯಿತು.
ಜತೆಗೆ ಇತರ ರೈತರ ಪ್ರೇರಣೆಯಿಂದ ಹೈನುಗಾರಿಕೆಯತ್ತ ಒಲವು ತೋರಿದರು. ಇದರ ಫಲ ಈ 2 ಕಾಯಕವೂ ಅವರ ಕೈ ಹಿಡಿಯಿತು. ಇದೀಗ ಬಸವರಾಜು ಸಂಪೂರ್ಣ ಕೃಷಿ ಕಾಯಕದಲ್ಲಿ ತೊಡಗುವುದರ ಮೂಲಕ ನೆಮ್ಮದಿಯ ಜೀವನ ರೂಪಿಸಿಕೊಂಡಿದ್ದಾರೆ.
9 ಎಕರೆಯಲ್ಲಿ ಕೃಷಿ: ಖುಷ್ಕಿ ಭೂಮಿಯಲ್ಲಿ ಕೃಷಿಯನ್ನು ಆರಂಭಿಸಿದ ಅವರು 3 ಎಕರೆಯಲ್ಲಿ ಮುಸುಕಿನ ಜೋಳದ ಜತೆಗೆ ಹಲವು ಫಸಲನ್ನು ಬೆಳೆದು ಯಶಸ್ಸು ಕಂಡರು. ಇದರಿಂದ ಕೃಷಿಯನ್ನು ಇನ್ನಷ್ಟು ವಿಸ್ತರಿಸಬೇಕು ಎನ್ನುವ ಹಂಬಲ ಹುಟ್ಟಿತು. ಇದರಿಂದ ಸಮೀಪದಲ್ಲೇ ತಮಿಳುನಾಡಿನ ರೈತರೊಬ್ಬರಿಂದ 6 ಎಕರೆ ಜಮೀನನ್ನು ಗುತ್ತಿಗೆ ಪಡೆದರು. ಹನಿನೀರಾವರಿ ವ್ಯವಸ್ಥೆಯನ್ನು ಅಳವಡಿಸುವುದರ ಮೂಲಕ ಇಲ್ಲೂ ಉತ್ತಮ ಫಸಲು ಬೆಳೆದು ಇತರ ರೈತರಿಂದ ಮೆಚ್ಚುಗೆಗೆ ಪಾತ್ರರಾದರು. ಪ್ರಸ್ತುತ ಮೂರೂವರೆ ಎಕರೆಯಲ್ಲಿ ಸೂರ್ಯಕಾಂತಿ, ಅರ್ಧ ಎಕರೆಯಲ್ಲಿ ಮನೆ ಬಳಕೆಗೆ ಗೋಧಿ, ಒಂದು ಎಕರೆಯಲ್ಲಿ ಮುಸುಕಿನ ಜೋಳ, ಒಂದು ಎಕರೆಯಲ್ಲಿ ಜಾನುವಾರುಗಳ ಮೇವನ್ನು ಬೆಳೆದಿದ್ದು, ಫಸಲು ಸಮೃದ್ಧಿಯಿಂದ ಕೂಡಿದೆ.
ಹೈನುಗಾರಿಕೆಗೆ ಹೆಚ್ಚಿನ ಪ್ರೀತಿ: ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿರುವ ಇವರು ಹೈನುಗಾರಿಕೆಗೆ ಹೆಚ್ಚಿನ ಪ್ರೀತಿ ತೋರಿದ್ದಾರೆ. ಆರಂಭದಲ್ಲಿ ಮಹಿಳಾ ಸ್ವಸಹಾಯ ಸಂಘದಿಂದ ಸಾಲ ಪಡೆದು ಒಂದು ಹಸುವನ್ನು ಸಾಕಲು ಆರಂಭಿಸಿದ ಅವರು ಇದೀಗ 6 ಇಲಾತಿ ಹಸುವನ್ನು ಹೊಂದಿದ್ದಾರೆ. ಪ್ರತಿನಿತ್ಯ 35 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ಉತ್ತಮ ಆದಾಯವೂ ಬರುತ್ತಿದೆ. ಹಾಗಾಗಿ, ಹೈನುಗಾರಿಕೆಗೂ ಇನ್ನಿಲ್ಲದ ಪ್ರೀತಿಯನ್ನು ಹೊಂದಿರುವ ಇವರು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಬೇಕು ಎನ್ನುವ ಗುರಿಯನ್ನು ಹೊಂದಿದ್ದಾರೆ.
ಕೊಟ್ಟಿಗೆ ಗೊಬ್ಬರ ಬಳಕೆ: ಸಂಪೂರ್ಣ ನೀರಾವರಿ ವ್ಯವಸ್ಥೆ, ಹೆಚ್ಚು ಕೊಟ್ಟಿಗೆ ಗೊಬ್ಬರ ಬಳಕೆ ಮಾಡುತ್ತಿದ್ದು, ದಾಸ್ತಾನು ಇರಿಸಿ ಕಾಲಕಾಲಕ್ಕೆ ಬೆಳೆಗಳಿಗೆ ನೀಡುತ್ತಿದ್ದಾರೆ. ಬೆಳೆಗಳಿಗೆ ರೋಗ ತಗುಲದಂತೆ ಮುತುವರ್ಜಿ ವಹಿಸಿದ್ದಾರೆ. ಇದರಿಂದ ಫಸಲು ಹೆಚ್ಚಿನ ಇಳುವರಿ ನೀಡುತ್ತದೆ. ಬಸವರಾಜು ಕುಟುಂಬ ಜಮೀನಿನಲ್ಲಿಯೇ ವಾಸವಿದೆ. 2 ಕಾಯಕದಲ್ಲೂ ಯಶಸ್ಸು ಗಳಿಸಲು ಇದು ಸಹ ಒಂದು ಕಾರಣವಾಗಿದೆ. ಅವರ ಪತ್ನಿ ಸುಶೀಲಮ್ಮ ಅವರು ಪತಿಯ ಕಾಯಕಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗಾಗಿ ಬಸವರಾಜುಗೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಈ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಒಟ್ಟಾರೆ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದ ಬಸವರಾಜು ಎದೆಗುಂದದೆ ಕಾಯಕದಲ್ಲಿ ಆಸಕ್ತಿ, ಶ್ರದ್ಧೆ ಹಾಗೂ ಶ್ರಮವಹಿಸಿದ ಪರಿಣಾಮ ಇದೀಗ ಕೃಷಿ ಹಾಗೂ ಹೈನುಗಾರಿಕೆ ಉತ್ತಮ ಜೀವನವನ್ನು ರೂಪಿಸಿಕೊಟ್ಟಿದೆ.
ಜೀವನ ನಿರ್ವಹಣೆಗೆ ಇಟ್ಟಿಕೊಂಡಿದ್ದ ಚಿಲ್ಲರೆ ಅಂಗಡಿಯಲ್ಲಿ ನಷ್ಟವಾಯಿತು. ಹಾಗಾಗಿ ಕೃಷಿಯಲ್ಲಿ ತೊಡಗಿದೆ. ಜೀವನಮಟ್ಟ ಸುಧಾರಿಸಿತು. ಕಳೆದ 25 ವರ್ಷದಿಂದಲೂ ಕೃಷಿ ಮಾಡುತ್ತಿದ್ದೇನೆ. ಜತೆಗೆ ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಉತ್ತಮ ಆದಾಯವೂ ಬರುತ್ತಿದೆ. ಇದರಿಂದ ನೆಮ್ಮದಿ ಜೀವನ ಸಾಗಿಸುತ್ತಿದ್ದೇನೆ. ಡೇರಿ ಹಾಗೂ ಕೃಷಿ ಇಲಾಖೆಯಿಂದ ಸವಲತ್ತು ನೀಡುವುದರ ಮೂಲಕ ಉತ್ತಮ ಸಹಕಾರ ನೀಡಲಾಗುತ್ತಿದೆ.
ಬಸವರಾಜು, ರೈತ ಹನೂರು