ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಅಡವಿ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಜೇನು ದಿನದ ಕಾರ್ಯಕ್ರಮ ಡಾ.ಸಿ.ಮಾದೇವಗೌಡ ಉದ್ಘಾಟಿಸಿದರು. ಡಾ.ಸಿದ್ದಪ್ಪ, ಅಡವಿ ಸಂಸ್ಥೆಯ ಅಧ್ಯಕ್ಷೆ ಮಾದಮ್ಮ, ಸಿದ್ದೇಗೌಡ, ಕಾರನ ಕ್ಯಾತೇಗೌಡ ಮತ್ತಿತರರಿದ್ದರು.
- ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇವಗೌಡ ಹೇಳಿಕೆ
ಯಳಂದೂರು: ಜೇನುನೋಣಗಳು ಜೇನುತುಪ್ಪದ ಮೂಲಕ ಜನರಿಗೆ ಅಮೂಲ್ಯವಾದ ಔಷಧ , ಸಸ್ಯಗಳ ಬೆಳವಣಿಗೆ ಮಾಡುವ ಮೂಲಕ ಕೃಷಿ, ಕಾಡಿನ ಬೆಳವಣಿಗೆಗೂ ಕಾರಣವಾಗಿವೆ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇವಗೌಡ ತಿಳಿಸಿದರು.
ಅವರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಅಡವಿ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಜೇನು ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಶಾಸ್ತ್ರದಲ್ಲಿ ಜೇನುನೊಣಗಳ ಸಾಕಣೆ ಮತ್ತು ಅವುಗಳ ಮೇಲೆ ಮನುಷ್ಯ ಬದುಕು ಕಟ್ಟಿಕೊಂಡಿದ್ದರ ಬಗ್ಗೆ ಮಾಹಿತಿ ಇದೆ. ಪರಿಸರದ ಪ್ರತಿ ಚಿಗುರು ಸಸ್ಯವಾಗಲು, ವೃಕ್ಷವಾಗಿ ಫಲ ಪುಷ್ಪ ಅರಳಿಸುವಲ್ಲಿ ಜೇನುಗಳ ಪರಾಗಸ್ಪರ್ಶವೇ ಕಾರಣ ಎಂದರು.
ಇಂದು ಕೃಷಿ ಮತ್ತಿತರ ಚಟುವಟಿಕೆಯಲ್ಲಿ ಅತಿಯಾದ ರಾಸಾಯನಿಕ ಮತ್ತು ಕೀಟನಾಶದ ಬಳಕೆಯಿಂದ ಅಮೂಲ್ಯ ಜೇನು ಕುಟುಂಬಗಳು ನಾಶವಾಗುತ್ತಿದ್ದು. ಸಸ್ಯ ಸಂಕುಲದ ನಾಶಕ್ಕೆ ಕಾರಣವಾಗಿದೆ. ರೈತರು ಹೊಲ, ಗದ್ದೆಗಳಲ್ಲಿ ಜೇನು ನೋಣಗಳು ಬಹಳ ಅವಶ್ಯಕತೆ ಇದೆ. ಜತೆಗೆ ಸಾಕಣೆಯಲ್ಲಿ ತೊಡಗಿಕೊಂಡರೆ ಫಸಲಿನ ಸಮೃದ್ಧತೆ ಜತೆಗೆ ಅಮೂಲ್ಯ ಔಷಧಯುಕ್ತ ಜೇನು ತೆಗೆದು ಆದಾಯ ಗಳಿಸಬಹುದು ಎಂದು ಹೇಳಿದರು.
ಬೆಟ್ಟದಲ್ಲಿ ನಾಲ್ಕಾರು ಜೇನಿನ ಜಾತಿ ಇದೆ. ಸೋಲಿಗರು ಜೇನು ಸಂಗ್ರಹಿಸುವಾಗ ಸ್ವಲ್ಪ ಭಾಗವನ್ನು ಮರದಲ್ಲಿ ಬಿಡುತ್ತಾರೆ. ಇದರಿಂದ ಜೇನು ಸಂತತಿ ಮುಂದುವರಿಯಲಿದೆ. ಗಿರಿವಾಸಿಗಳು ಮೂಲ ರೂಪದಲ್ಲಿ ಜೇನು ಸಂಗ್ರಹಿಸಿ, ಸಂಸ್ಕರಿಸಿ ಮಾರಾಟ ಮಾಡುತ್ತಾರೆ. ರಾಜ್ಯ ಸರ್ಕಾರ 2019ರಲ್ಲಿ ಜೇನುನೊಣವನ್ನು ರಾಜ್ಯಕೀಟ ಎಂದು ಘೋಷಣೆ ಮಾಡಿದ್ದು, ಈ ಕೀಟದ ಮಹತ್ವವನ್ನು ತಿಳಿಸುತ್ತದೆ ಎಂದು ವಿವರಿಸಿದರು.
ಡಾ.ಸಿದ್ದಪ್ಪ, ಅಡವಿ ಸಂಸ್ಥೆಯ ಅಧ್ಯಕ್ಷೆ ಮಾದಮ್ಮ, ಸಿದ್ದೇಗೌಡ, ಕಾರನ ಕ್ಯಾತೇಗೌಡ, ನಂಜೇಗೌಡ, ಬಸಮ್ಮ, ಮಂಜುನಾಥ, ಕೇತಮ್ಮ, ಮಹೇಶ್ ಇತರರು ಇದ್ದರು.