ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೃಷಿ ಭೂಮಿ ಸ್ವಾಧೀನ ಸಾಧಕ-ಬಾಧಕ ವಿಷಯ ಕುರಿತು ಚರ್ಚೆ ಮತ್ತು ಕಾರ್ಯಾಗಾರವನ್ನು ಮೈಸೂರು ವಿಶ್ವ ವಿದ್ಯಾಲಯದ ಪ್ರಾಚ್ಯ ವಿದ್ಯಾಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ , ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್‌ಕುಮಾರ್, ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು ಮತ್ತು ಇತರರು ಉದ್ಘಾಟಿಸಿದರು.
- ಪ್ರೊ.ಎಸ್.ಶಿವರಾಜಪ್ಪ ಅಭಿಪ್ರಾಯ
- ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾರ್ಯಾಗಾರ
ಚಾಮರಾಜನಗರ: ಕೃಷಿ ಭೂಮಿ ಸ್ವಾಧೀನವು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಪ್ರಾಚ್ಯ ವಿದ್ಯಾಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ತಿಳಿಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೃಷಿ ಭೂಮಿ ಸ್ವಾಧೀನ ಸಾಧಕ-ಬಾಧಕ ವಿಷಯ ಕುರಿತು ಅವರು ಮಾತನಾಡಿದರು. ರೈತರ ಕೃಷಿ ಭೂಮಿಯ ಸ್ವಾಧೀನವನ್ನು ಸರ್ಕಾರ ಬಹಳ ಉತ್ಸಾಹದಿಂದ ಮಾಡುತ್ತದೆ. ಆದರೆ ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ತಾತ್ಸಾರ ತೋರುತ್ತದೆ. ಕೆರೆ, ಕಟ್ಟೆಗಳು, ರಸ್ತೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸುವಲ್ಲಿ ವಿಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿ ಭೂಮಿ ಸ್ವಾಧೀನದಿಂದ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನೀರಿನ ರಕ್ಷಣೆ, ಪರಿಸರದ ಉಳಿವನ್ನು ಗಮದಲ್ಲಿಟ್ಟುಕೊಂಡು ಸಮತೋಲನದಲ್ಲಿ ಭೂಮಿಯ ಸ್ವಾಧೀನ ಆಗಬೇಕು. ಇಂದಿನ ಬರಗಾಲದ ಪರಿಸ್ಥಿತಿಗೆ ಅಧಿಕ ಕೈಗಾರಿಕೀಕರಣವೇ ಕಾರಣ. ಹೀಗಾಗಿ ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಯಾಗಿ ಎಂದರು.
ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಕೃಷಿ ಇಲ್ಲದೆ ದೇಶದಲ್ಲಿ ಅರ್ಥ ವ್ಯವಸ್ಥೆಯೇ ಇರುವುದಿಲ್ಲ. ರೈತರಿಲ್ಲದೆ ದೇಶವಿಲ್ಲ. ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಆಗ ದೇಶ ಮತ್ತು ಕೃಷಿ ಎರಡೂ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಪ್ರಸ್ತಾವಿಕವಾಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಭೂ ಸ್ವಾಧೀನವನ್ನು ಕೈಬಿಡಬೇಕು. ರೈತರ ಮಾಲೀಕತ್ವದಲ್ಲಿ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಬೇಕು. ಈ ರೀತಿ ಮಾಡಿದರೆ ಭೂಮಿ ಕಳೆದುಕೊಂಡ ರೈತ ಬಂಡವಾಳಶಾಹಿಗಳು ಮತ್ತು ಕೈಗಾರಿಕೆಗಳ ಬಳಿ ಕೂಲಿ ಕೆಲಸಕ್ಕೆ ಸೇರಿಕೊಳ್ಳುವುದು ತಪ್ಪುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ, ರಾಜ್ಯ ಗೌರವಾಧ್ಯಕ್ಷ ರಾಜು, ಶಿವರುದ್ರಪ್ಪ, ಮಲೆಯೂರು ಮಹೇಂದ್ರ, ಅಂಗಡಿ ಸತೀಶ್, ಸಿದ್ದಬಸಪ್ಪ, ನಾಗಮಲ್ಲಪ್ಪ, ಗುರುವಿನಪುರ ಚಂದ್ರು, ಸತೀಶ್, ರಾಜು, ಬಸವರಾಜು, ನಾಗರಾಜಪ್ಪ ಇತರರು ಇದ್ದರು.
ಮುಂಗಾರು ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತರು ಮಳೆಗಾಗಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ಭೂಮಿ ಸ್ವಾಧೀನ ಸಾಧಕ-ಬಾಧಕ ವಿಷಯ ಕುರಿತ ಕಾರ್ಯಾಗಾರಕ್ಕೂ ಮೊದಲು ರೈತರು ದೇವಸ್ಥಾನಕ್ಕೆ ಭೇಟಿ ನೀಡಿ ಮಹದೇಶ್ವರರಲ್ಲಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.