ರೈತರಿಗೆ ತೊಂದರೆ ನೀಡುತ್ತಿರುವ ಆರ್‌ಟಿಐ ಕಾರ್ಯಕರ್ತ ಕುಣಗಳ್ಳಿ ರಂಗಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಘಟಕದಿಂದ ಸೋಮವಾರ ಮುಡಿಗುಂಡ ಸೇತುವೆಯ ಬಳಿ ಕೆಲ ಸಮಯ ರಸ್ತೆ ತಡೆ ನಡೆಸಲಾಯಿತು.
ಕೊಳ್ಳೇಗಾಲ : ರೈತರಿಗೆ ತೊಂದರೆ ಕೊಡಲು ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿರುವ ಆರ್‌ಟಿಐ ಕಾರ್ಯಕರ್ತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಘಟಕ ಸೋಮವಾರ ಮುಡಿ ಗುಂಡ ಸೇತುವೆಯ ಬಳಿ ಕೆಲಕಾಲ ರಸ್ತೆ ತಡೆ ಚಳವಳಿ ನಡೆಸಿತು.
ಸಂಘಟನೆ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಆರ್‌ಟಿಐ ಕಾರ್ಯಕರ್ತ ಕುಣಗಳ್ಳಿ ರಂಗಸ್ವಾಮಿ ಅವರು ಸಾಗುವಳಿ ಮಾಡುತ್ತಿರುವ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಡಿವೈಎಸ್ಪಿ ಮೋಹನ್ ಅವರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರಲ್ಲದೆ, ರಂಗಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಭರವಸೆ ನೀಡಿದರು. ಇದರಿಂದ ರೈತರು ರಸ್ತೆ ತಡೆ ಪ್ರತಿಭಟನೆ ಕೈಬಿಟ್ಟರು.
ನಂತರ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ತಹಸೀಲ್ದಾರ್ ಬಸವರಾಜು ಮಾತನಾಡಿ, ರಂಗಸ್ವಾಮಿ ವಿರುದ್ಧ ಆಧಾರ ಸಮೇತ ದೂರು ಸಲ್ಲಿಸಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಬಳಿಕ ರೈತ ಸಂಘ ಪದಾಧಿಕಾರಿಗಳು ಲಿಖಿತವಾಗಿ ದೂರು ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯ ಮಾಡ್ರಳ್ಳಿ ಪಾಪಣ್ಣ, ಬೆರಬಾಂಡಿ ಶಶಿ, ಭೀಮನಬೀಡು ರಾಜು, ಹೊನ್ನೇಗೌಡನಹಳ್ಳಿ ಗಿರಿ ಕುಣಗಳ್ಳಿ ಸೋಮಣ್ಣ, ವೆಂಕಟಶೆಟ್ಟಿ, ಸಿದ್ದೇಶ್, ಶಂಕರ ಮುಳ್ಳೂರು, ವೀರಭದ್ರಸ್ವಾಮಿ ಇದ್ದರು.