ಚಾಮರಾಜನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತಮಠದ ಅನುಭವ ಮಂಟಪದಲ್ಲಿ ಹಿತೈಷಿಗಳ ಬಳಗದಿಂದ ಮಂಗಳವಾರ ಆಯೋಜಿಸಿದ್ದ ನಿವೃತ್ತ ಸಹಾಯಕ ಆರಕ್ಷಕ ಉಪ ನಿರೀಕ್ಷಕ ಬಿ.ವಿಶ್ವ ಬೀಳ್ಕೊಡುಗೆ ಸಮಾರಂಭವನ್ನು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಉದ್ಘಾಟಿಸಿದರು. ಶ್ರೀಚನ್ನಬಸವಸ್ವಾಮೀಜಿ, ಮೂಡ್ಲುಪುರ ನಂದೀಶ್, ಪಿ.ಮರಿಸ್ವಾಮಿ, ಬಿ.ಕೆ.ರವಿಕುಮಾರ್ ಮತ್ತು ಇತರರು ಇದ್ದರು.
- ನಿವೃತ್ತರಾದ ಸಹಾಯಕ ಆರಕ್ಷಕ ಉಪ ನಿರೀಕ್ಷಕ ಬಿ.ವಿಶ್ವಗೆ ಸನ್ಮಾನ
- ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಾಗಿ
ಚಾಮರಾಜನಗರ: ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವಕ್ಕೆ ಅನುಗುಣವಾಗಿ ಪೊಲೀಸ್ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ನಿವೃತ್ತ ಸಹಾಯಕ ಆರಕ್ಷಕ ಉಪ ನಿರೀಕ್ಷಕ ಬಿ.ವಿಶ್ವ ತಿಳಿಸಿದರು.
ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತಮಠದ ಅನುಭವ ಮಂಟಪದಲ್ಲಿ ಹಿತೈಷಿಗಳ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ 33 ವರ್ಷಗಳ ಕಾಲ ಜನಸ್ನೇಹಿಯಾಗಿ ಸಲ್ಲಿಸಿದ ಸೇವೆಗೆ ಬೀಳ್ಕೊಡುಗೆ ನೀಡಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನವೇ ನನ್ನ ಧರ್ಮಗ್ರಂಥ, ಕಾಯಕವೇ ಕೈಲಾಸ ಎಂಬ ಬಸವಣ್ಣನ ತತ್ವದಂತೆ ಜನಸೇವೆಯೇ ನನ್ನ ಕಾಯಕ. ನನ್ನ ಅಧಿಕಾರ ಮುಗಿದ ಮೇಲೂ ಜನರು ತೋರಿಸಿದ ಪ್ರೀತಿ, ವಿಶ್ವಾಸ ತುಂಬಾ ದೊಡ್ದದು. ನನ್ನ 33 ವರ್ಷಗಳ ಸೇವೆಗೆ ಸಂದ ಅತಿ ದೊಡ್ಡ ಗೌರವವಿದು ಎಂದು ಭಾವುಕರಾದರು.
ನಗರ ವಿರಕ್ತ ಮಠದ ಶ್ರೀಚನ್ನಬಸವ ಸ್ವಾಮೀಜಿ ಮಾತನಾಡಿ, ವಿಶ್ವ ಅವರು ಖಾಕಿ ಧರಿಸಿ ಕಾಯಕವನ್ನೇ ಪೂಜೆಯನ್ನಾಗಿ ಮಾಡಿದರು. ಜನಸ್ನೇಹಿ ಆಡಳಿತಕ್ಕೆ ಇವರೇ ಉದಾಹರಣೆ. ಇಂದು ಇಷ್ಟು ಜನ ಸೇರಿರುವುದೇ ಅವರ ಸೇವೆಗೆ ಸಿಕ್ಕ ಫಲ ಇವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಆಶೀರ್ವದಿಸಿದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ವಿಶ್ವ ಅವರು ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ನಿವೃತ್ತಿ ಹೊಂದುವುದು ಸಹಜ. ಇದನ್ನೂ ಮೀರಿ ವಿಶ್ವ ಅವರು ಜನಮನ್ನಣೆಗಳಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿ, ವಿಶ್ವ ಅವರ 33 ವರ್ಷಗಳ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ. ಸಾರ್ವಜನಿಕರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಅಧಿಕಾರ ಮುಗಿದ ಮೇಲೂ ಜನ ಹೀಗೆ ಪ್ರೀತಿಯಿಂದ ಬೀಳ್ಕೊಡೋದು ಬಹಳ ಅಪರೂಪ. ಇವರು ನಮ್ಮ ಇಲಾಖೆಗೆ ಮಾದರಿ ಎಂದು ಶ್ಲಾಘಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಪೊಲೀಸ್ ಠಾಣೆ ಎಂದರೆ ಭಯ ಪಡುವ ಕಾಲದಲ್ಲಿ, ವಿಶ್ವ ಅವರು ಜನಸ್ನೇಹಿಯಾಗಿ ಧೈರ್ಯದಿಂದ ಬರುವಂತೆ ಮಾಡಿದರು. ಇದೇ ನಿಜವಾದ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಂದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ) ಮಾತನಾಡಿ, ಅಧಿಕಾರದಲ್ಲಿದ್ದಾಗ ವಿನಯವಂತಿಕೆಯಿಂದ ನಡೆದುಕೊಂಡು ವಿಶ್ವ ಅವರಿಗೆ ನಿವೃತ್ತಿ ಸಂದರ್ಭದಲ್ಲಿ ಜನರ ಪ್ರೀತಿಯೇ ದೊಡ್ಡ ಪ್ರಶಸ್ತಿ ಎಂದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಸರ್ವಧರ್ಮಗಳು ಸಾರುವ ಮಾನವೀಯತೆಯನ್ನು ಪೊಲೀಸರ ಕರ್ತವ್ಯದಲ್ಲಿ ವಿಶ್ವ ತೋರಿಸಿದ್ದಾರೆ ಎಂದರು. ಜೈ ಭುವನೇಶ್ವರಿ ಕನ್ನಡ ಯುವಕರ ಸಂಘದ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ವಿಶ್ವ ಅವರು ಸಾರ್ವಜನಿಕರ-ಪೊಲೀಸರು-ಮಾಧ್ಯಮದವರ ನಡುವೆ ಸೇತುವೆಯಾಗಿ ಕೆಲಸ ಮಾಡಿದರು. ಇಂತಹ ಅಧಿಕಾರಿಗಳು ಇಲಾಖೆಯ ಆಸ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಡಿವೈಎಸ್‌ಪಿ ಸ್ನೇಹರಾಜ್, ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಗ್ಗೇಶ್, ರಾಮಸಮುದ್ರದ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ನವೀನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಸಾಹಿತಿ ಮಂಜು ಕೋಡಿಉಗನೆ, ಪತ್ರಕರ್ತ ಶಿವಶಂಕರ್ ಚಟ್ಟು, ರೈತ ಮುಖಂಡ ಬಸವಣ್ಣ, ಎಸ್‌ಡಿಪಿಐ ಮುಖಂಡ ಅಬ್ರಹರ್ ಅಹಮದ್, ಸಿ.ಎಂ ಕೃಷ್ಣಮೂರ್ತಿ, ನಮ್ಮನೆ ಪ್ರಶಾಂತ್, ಚಾ.ರಂ.ಶ್ರೀನಿವಾಸ ಗೌಡ, ಪಣ್ಯದಹುಂಡಿ ರಾಜು. ಪುಷ್ಪಲತಾ ಸುಬ್ರಮಣ್ಯ ಇತರರು ಇದ್ದರು.