ಯಳಂದೂರು ಸಮೀಪದ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಚಾಮರಾಜನಗರ ಕೃಷಿ ವಿವಿ ವತಿಯಿಂದ ಆಯೋಜಿಸಿರುವ ಗ್ರಾಮೀಣ ಕೃಷಿ ಕಾರ್ಯಾನುಭವನ ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರಿಗೆ ಥರ್ಮಾಮೀಟರ್‌ಗಳನ್ನು ನೀಡಲಾಯಿತು. ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಪ್ರತಿಭಾ ಇತರರು ಇದ್ದರು.
- ರೇಷ್ಮೆ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಪ್ರತಿಭಾ ಸಲಹೆ
- ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ
ಯಳಂದೂರು: ರೇಷ್ಮೆ ಬೆಳೆಯಲ್ಲಿ ವೈಜ್ಞಾನಿಕ ಹಾಗೂ ನೂತನ ತಂತ್ರಜ್ಞಾನವನ್ನು ಬಳಸಿಕೊಂಡಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು ಎಂದು ರೇಷ್ಮೆ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಪ್ರತಿಭಾ ಸಲಹೆ ನೀಡಿದರು.
ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ಚಾಮರಾಜನಗರ ಕೃಷಿ ವಿಶ್ವವಿದ್ಯಾಲಯದಿಂದ ಆಯೋಜಿಸಿರುವ 2026-27ನೇ ಸಾಲಿನ ಗ್ರಾಮೀಣ ಕೃಷಿ ಕಾರ್ಯಾನುಭವದಲ್ಲಿ ರೇಷ್ಮೆ ತಂತ್ರಜ್ಞಾನ ವರ್ಗಾವಣೆ ಮತ್ತು ರೈತ-ವಿಜ್ಞಾನಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೇಷ್ಮೆ ಬೆಳೆಯನ್ನು ವೈಜ್ಞಾನಿಕ ಮಾದರಿಯಲ್ಲಿ ಅನುಸರಿಸಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಉತ್ತಮ ಆದಾಯದ ಮೂಲವಾಗಿದೆ. ಹುಳು ಸಾಕಣೆ ಸಂದರ್ಭದಲ್ಲಿ ತಾಪಮಾನ, ತೇವಾಂಶವನ್ನು ನಿಗದಿತ ಪ್ರಮಾಣದಲ್ಲಿ ತಮ್ಮ ಶೆಡ್‌ಗಳಲ್ಲಿ ಇರಿಸಿಕೊಂಡಲ್ಲಿ ಉತ್ತಮ ಇಳುವರಿ ಪಡೆದುಕೊಳ್ಳಬಹುದು. ರೇಷ್ಮೆ ಸಾಕಣೆಯಲ್ಲಿ ಹಳೇ ಪದ್ಧತಿಗಳನ್ನು ಬಿಟ್ಟು ಈಗ ಆವಿಷ್ಕಾರವಾಗಿರುವ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು, ಉತ್ತಮ ತಳಿಯ ರೇಷ್ಮೆ ಗೂಡುಗಳನ್ನು ಬೆಳೆದರೆ ಉತ್ತಮ ಬೆಲೆಯೂ ಲಭಿಸುತ್ತದೆ. ಇದನ್ನು ಲಾಭದಾಯಕವಾಗಿ ಹೇಗೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ರೈತರು ಯೋಚಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಅನೇಕ ತಜ್ಞರು, ವಿಜ್ಞಾನಿಗಳು ಸಲಹೆ ನೀಡುತ್ತಾರೆ. ಇದರ ಲಾಭವನ್ನು ಪಡೆದುಕೊಳ್ಳಬೇಕು. ತಮ್ಮ ಸಮಸ್ಯೆಗಳಿಗೆ ಇಂತಹ ವೇದಿಕೆಗಳಲ್ಲಿ ಉತ್ತರ ಕೊಂಡುಕೊಳ್ಳಲು ಸಾಧ್ಯವಾಗುವುದರಿಂದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ತೇವಾಂಶ ಹಾಗೂ ತಾಪಮಾನವನ್ನು ಕಂಡುಹಿಡಿಯಬಲ್ಲ ಥರ್ಮಾಮೀಟರ್‌ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಇಲ್ಲಿ ಮಾಡಿರುವ ಕ್ರಾಮ್ ಮ್ಯೂಸಿಯಂ ಹಾಗೂ ರೈತರ ಮಾಹಿತಿ ಕೇಂದ್ರವಾದ ಕೃಷಿ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ, ರೈತರಿಗೆ ವೈಜ್ಞಾನಿಕ ಕೃಷಿ ಮಾಹಿತಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ತಲುಪಿಸುವಲ್ಲಿ ವಿದ್ಯಾರ್ಥಿಗಳು ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರೇಷ್ಮೆ ಇಲಾಖೆ ಸಹಯೋಗದಲ್ಲಿ ಹಿಪ್ಪುನೇರಳೆ ಗಿಡಗಳನ್ನು ನೆಡಲಾಯಿತು.
ಡಾ.ಎಂ.ಎಸ್.ರಂಜಿನಿ, ಮಂಜುನಾಥ್, ಡಾ.ಚಂದ್ರಶೇಖರ್ ಎಸ್.ಕಲ್ಲಿಮನಿ, ಶ್ವೇತಾ, ಪುಟ್ಟಮಾದಮ್ಮ, ಡಾ.ದೇವರಾಜು, ಶಶಿ, ಬಸವರಾಜು, ರೇವಣ್ಣ, ಲಿಂಗರಾಜು ಹಾಗೂ ಕೃಷಿ ವಿವಿ ವಿದ್ಯಾರ್ಥಿಗಳು ರೈತರು ಸೇರಿದಂತೆ ಅನೇಕರು ಇದ್ದರು.