ಚಾಮರಾಜನಗರ ತಾಲೂಕಿನ ಜ್ಞಾನದೀಪ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳ ಕುರಿತು ವಿವರಣೆ ನೀಡಿದರು.
- ಜ್ಞಾನದೀಪ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಆರ್.ಪಿ.ನಂಜುಂಡಸ್ವಾಮಿ ಸಲಹೆ
- ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ
- ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಭೇಟಿ
ಚಾಮರಾಜನಗರ: ಮಕ್ಕಳಲ್ಲಿ ಸೃಜನಾತ್ಮಕ ಕಲಿಕೆಯಿಂದ ಉತ್ತಮ ಜ್ಞಾನ ವೃದ್ಧಿಯಾಗುವುದರ ಜತೆಗೆ, ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗಲಿದೆ ಎಂದು ಜ್ಞಾನದೀಪ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಆರ್.ಪಿ.ನಂಜುಂಡಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಜ್ಞಾನದೀಪ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜ್ಞಾನದೀಪ ಶಾಲೆಯಲ್ಲಿ ಕಳೆದ ವರ್ಷದಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಇದರಿಂದ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಹೊಸತನ ಬೆಳೆಯುತ್ತದೆ. ಇದು ಮಕ್ಕಳ ಕಲಿಕೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ಆರ್.ಜಯಲಕ್ಷ್ಮಿ ಮಾತನಾಡಿ, ಮಕ್ಕಳು ಪ್ರಾಥಮಿಕ ಹಂತದಲ್ಲೇ ವಿಜ್ಞಾನ ಪ್ರಯೋಗಗಳು ಮತ್ತು ಮಾದರಿಗಳನ್ನು ತಯಾರಿಸುವುದರಿಂದ ಮಕ್ಕಳಲ್ಲಿ ಸೃಜನಾತ್ಮಕತೆ ಮೂಡುತ್ತದೆ. ವಿಜ್ಞಾನದ ಆವಿಷ್ಕಾರಗಳನ್ನು ಅರಿತುಕೊಳ್ಳುವುದರಿಂದ ಸ್ವ-ಅನುಭವ ಮೂಲಕ ಕಲಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು.
ಶಾಲಾ ಮಕ್ಕಳು ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳು
ಸ್ವ-ಅನುಭವದ ಮೂಲಕ ಮಾದರಿಗಳನ್ನು ಮತ್ತು ಪ್ರಯೋಗಗಳನ್ನು ಮಾಡಿ ಪಾಲಕರಿಗೆ
ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಹರದನಹಳ್ಳಿ ಮತ್ತು ಅಮಚವಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.