ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಸಮೀಪದ ಚೆಂಡುಮಲ್ಲಿಗೆ ಸಂಸ್ಕರಣೆ ಘಟಕಕ್ಕೆ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಸವಿತಾ, ದೊರೆಸ್ವಾಮಿ, ಎಂ.ಎಸ್.ತನ್ಮಯಿ ಇದ್ದರು.
ಗುಂಡ್ಲುಪೇಟೆ: ತಾಲೂಕಿನ ಕಗ್ಗಳದಹುಂಡಿ ಸಮೀಪದ ಚೆಂಡುಮಲ್ಲಿಗೆ ಸಂಸ್ಕರಣೆ ಘಟಕದಿಂದ ದುರ್ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಬುಧವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಹಾಜರಿದ್ದ ಗ್ರಾಮಸ್ಥರು ಘಟಕವು ಸುರಕ್ಷತಾ ವಿಧಾನಗಳನ್ನು ಪಾಲಿಸದ ಪರಿಣಾಮ ಸುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಉಸಿರಾಟದ ಸಮಸ್ಯೆಯಾಗುತ್ತಿದೆ. ಸಂಸ್ಕರಿಸಿದ ಕೊಳವೆ ನೀರನ್ನು ಭೂಮಿಗೆ ಬಿಡುವುದರಿಂದ ಅಂತರ್ಜಲ ಕಲುಷಿತವಾಗುತ್ತಿದ್ದು, ಈ ನೀರನ್ನು ಕುಡಿದ ಸಾರ್ವಜನಿಕರಿಗೆ ಅಲರ್ಜಿ ಹಾಗೂ ಚರ್ಮ ಸಂಬಂಧಿತ ಸಮಸ್ಯೆಗಳು ಕಂಡುಬರುತ್ತಿವೆ. ಆದ್ದರಿಂದ ಕೂಡಲೇ ಘಟಕವನ್ನು ಬಂದ್ ಮಾಡಿಸಬೇಕು ಎಂದು ಮನವಿ ಮಾಡಿದರು.
ಹೂವಿನ ಸಂಗ್ರಹಾಗಾರ, ಸಂಸ್ಕರಣೆ ನಂತರ ನೀರಿನ ವಿಲೇವಾರಿ, ಹೊಗೆಚಿಮಣಿ ಮುಂತಾದ ಸ್ಥಳಗಳನ್ನು ಘಟಕದ ಅಧಿಕಾರಿಗಳ ಜತೆ ತೆರಳಿ ವೀಕ್ಷಿಸಿದರು. ನಂತರ ಸ್ಥಳದಲ್ಲಿದ್ದ ಸುತ್ತಲಿನ ಶಿಂಡನಪುರ, ಕೆಲಸೂರು, ಕೊಡಸೋಗೆ ಹಾಗೂ ತೆರಕಣಾಂಬಿ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಕೊಳವೆ ಬಾವಿಗಳ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆದುಕೊಳ್ಳಬೇಕು. ಪರಿಸರ ಇಲಾಖೆಯ ಅಧಿಕಾರಿಗಳು ಈ ಪ್ರದೇಶಗಳ ಗಾಳಿಯ ಗುಣಮಟ್ಟ ಹಾಗೂ ವಾಯುಮಾಲಿನ್ಯದ ಬಗ್ಗೆ ಶೀಘ್ರವೇ ವರದಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪರಿಸರ ಇಲಾಖೆಯ ಸವಿತಾ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದೊರೆಸ್ವಾಮಿ, ತಹಸೀಲ್ದಾರ್ ಎಂ.ಎಸ್.ತನ್ಮಯಿ ಇದ್ದರು.