ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಜಮೀನೊಂದಕ್ಕೆ ಲಗ್ಗೆ ಇಟ್ಟ ಕಾಡಾನೆ.
ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಜಮೀನೊಂದಕ್ಕೆ ಗುರುವಾರ ರಾತ್ರಿ ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿದೆ.
ಗ್ರಾಮದ ದಾಸಶೆಟ್ಟಿ ಎಂಬುವರು ಮುಸುಕಿನ ಜೋಳದ ಫಸಲನ್ನು ಬೆಳೆದಿದ್ದರು. ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಆನೆ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ತಿನ್ನುತ್ತಿತ್ತು. ಈ ವೇಳೆ ಕಾವಲಿಗಾಗಿ ಆಗಮಿಸಿದ ರೈತನಿಗೆ ಕಾಡಾನೆ ಹಾವಳಿ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ಸ್ಥಳೀಯ ರೈತರ ಜತೆಗೂಡಿ ಬ್ಯಾಟರಿ ಬೆಳಕಿನಲ್ಲಿ ಕೂಗುತ್ತಾ ಆನೆಯನ್ನು ಕಾಡಿನತ್ತ ಓಡಿಸುವುದರ ಮೂಲಕ ಹೆಚ್ಚಿನ ಫಸಲು ಹಾನಿಯಾಗುವುದನ್ನು ತಪ್ಪಿಸಿದ್ದಾರೆ.
ಈ ಭಾಗದಲ್ಲಿ ರಾತ್ರಿ ವೇಳೆ ಕಾಡಾನೆ ಆಗಾಗ್ಗೆ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶ ಪಡಿಸುತ್ತಲೇ ಇದೆ. ಹಲವು ಬಾರಿ ಕಾಡಾನೆಯನ್ನು ಕಾಡಿನತ್ತ ಓಡಿಸಲಾಗಿದೆ. ಕಾಡಾನೆಯ ಹಾವಳಿಯನ್ನು ತಪ್ಪಿಸುವಂತೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಇನ್ನು ಮುಂದಾದರೂ ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.